ಲಖನೌ: ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಬಹಳ ದಿನಗಳಿಂದ ಗಂಟಲು ಕ್ಯಾನ್ಸರ್‌ನಿಂದ ಕವಿ ಮುನವ್ವರ್ ಬಳಲುತ್ತಿದ್ದರು. ಭಾನುವಾರ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ನಿಧನರಾಗಿದ್ದಾರೆ.
ಭಾನುವಾರ ತಡರಾತ್ರಿ ನನ್ನ ತಂದೆ ನಿಧನರಾಗಿದ್ದು, ಇಂದು (ಸೋಮವಾರ) ಅಂತ್ಯಕ್ರಿಯೆ ನಡೆಯಲಿದೆ ಎಂದು ರಾಣಾ ಅವರ ಪುತ್ರಿ ಸುಮಯ್ಯಾ ತಿಳಿಸಿದ್ದಾರೆ. ಕವಿ ರಾಣಾ ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಮುನವ್ವರ್ ರಾಣಾ ಅವರು 1952ರಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಜನಿಸಿದರು. 2014ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ರಾಣಾ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಒಂದಾದ 'ಮಾ' ಕವಿತೆಯು ಉರ್ದು ಸಾಹಿತ್ಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ.
ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ರಾಣಾ ಅವರ ಕವಿತೆಯ ದ್ವಿಪದಿಯನ್ನು ಹಂಚಿಕೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕವಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ದೇಶದ ಖ್ಯಾತ ಕವಿ ಮುನವ್ವರ್ ಅವರ ನಿಧನವು ಅತ್ಯಂತ ಹೃದಯ ವಿದ್ರಾವಕವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ. ಹೃತ್ಪೂರ್ವಕ ಶ್ರದ್ಧಾಂಜಲಿ' ಎಂದು ಯಾದವ್ ಬರೆದಿದ್ದಾರೆ.