ತಿರುವನಂತಪುರಂ: ಅಪರೂಪದ ಜನ್ಮಜಾತ ಕಾಯಿಲೆಯಿಂದ ಬಳಲುತ್ತಿರುವ ತಮ್ಮ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸುವ ಪ್ರಯತ್ನಗಳು ವಿಫಲವಾದ ನಂತರ ಕೇರಳದ ಕೊಟ್ಟಾಯಂನ ದಂಪತಿ ತಮ್ಮ ಕುಟುಂಬದ ಎಲ್ಲಾ ಐವರು ಸದಸ್ಯರಿಗೆ ದಯಾಮರಣ ನೀಡಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ದಂಪತಿಗಳಾದ ಸ್ಮಿತಾ ಆಂಟೋನಿ ಮತ್ತು ಮನು ಜೋಸೆಫ್ ತಮ್ಮ ಮೂವರು ಮಕ್ಕಳಲ್ಲಿ ಇಬ್ಬರ ಚಿಕಿತ್ಸೆಯನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಾದ ಸ್ಯಾಂಟ್ರಿನ್ ಮತ್ತು ಸ್ಯಾಂಟೊಯೊ ಇಬ್ಬರಿಗೂ ಸಾಲ್ಟ-ವೇಸ್ಟಿಂಗ್ ಕಂಜೆನಿಟಲ್ ಅಡ್ರಿನಲ್ ಹೈಪಪ್ರ್ಲಾಸಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮೊದಲ ಮಗು ಕೂಡ 90 ರಷ್ಟು ಸ್ವಲೀನತೆಯಿಂದ ಬಳಲುತ್ತಿದೆ.
ತಾವಿಬ್ಬರೂ ವೃತ್ತಿಯಲ್ಲಿ ನರ್ಸ್‍ಗಳಾಗಿದ್ದರೂ, ಎರಡು ಮತ್ತು ಮೂರನೇ ಮಗುವಿನ ಯೋಗಕ್ಷೇಮ ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾಗಿರುವುದರಿಂದ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲು ಹಾಗೂ ಮಕ್ಕಳಿಗೆ ಔಷಧ ಖರೀದಿಸಲು ಆಸ್ತಿಯನ್ನು ಅಡವಿಟ್ಟು ಮಾರಾಟ ಮಾಡಿರುವುದಾಗಿ ಸ್ಮಿತಾ ತಿಳಿಸಿದರು.
ನಾವು ನಮ್ಮ ದೈನಂದಿನ ಖರ್ಚು, ಚಿಕ್ಕ ಮಕ್ಕಳ ಚಿಕಿತ್ಸೆ ಮತ್ತು ಹಿರಿಯ ಮಗುವಿನ ಶಿಕ್ಷಣವನ್ನು ಪೂರೈಸಲು ಹೆಣಗಾಡುತ್ತಿದ್ದೇವೆ. ಆದಾಯವಿಲ್ಲದ ಕಾರಣ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಮತ್ತು ಚಿಕಿತ್ಸೆಗಾಗಿ ನೆರವು ಕೋರಿ ಸ್ಥಳೀಯ ಪಂಚಾಯತ್ಗೆ ಮನವಿ ಮಾಡಿದರೂ ಅವರು ಯಾವುದೇ ನೆರವು ನೀಡಲಿಲ್ಲ. ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶದ ನಂತರ ಕಾರ್ಯದರ್ಶಿ ಕಡತವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ, ಆದರೆ ಇದುವರೆಗೆ ಸಂಬಂಧಿಸಿದ ಕೆಲಸದ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಮಹಿಳೆ ಹೇಳಿದರು.
ಆದ್ದರಿಂದ ನಮ್ಮ ಕುಟುಂಬಕ್ಕೆ ಈಗ ದಯಾಮರಣವನ್ನು ವಿನಂತಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ ಎಂದು ಅವರು ಹೇಳಿದರು. ನಾವು ಈಗ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಅನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ. ನಮ್ಮ ಕುಟುಂಬ ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದೆ ಎಂದು ಸ್ಮಿತಾ ಹೇಳಿದ್ದಾರೆ.