ಕಾಸರಗೋಡು: ಜಿಲ್ಲಾ ಕನ್ನಡ ಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಕಾಸರಗೋಡು ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜರುಗಿತು. ಸಂಘದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಸಂಘದ ವತಿಯಿಂದ ನಡೆಯಲಿರುವ ವಾರ್ಷಿಕ ದತ್ತಿಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಪತ್ರಕರ್ತರ ಕುಟುಂಬ ಸಂಗಮ ಕಾರ್ಯಕ್ರಮವನ್ನು ರಾಣಿಪುರಂ ಪ್ರವಾಸಿ ಧಾಮದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು. ಈ ಸಂದರ್ಭ ಪತ್ರಿಕಾ ರಂಗದ ಸಮಗ್ರ ಸಾಧನೆಗೆ ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಹಿರಿಯ ಸದಸ್ಯ ರವಿ ನಾಯ್ಕಾಪು ಅವರನ್ನು ಸಂಘಟನೆ ವತಿಯಿಂದ ಅಭಿನಂದಿಸಲಾಯಿತು. ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ಯಾದವ್ ತೆಕ್ಕೆಮೂಲೆ ಹಾಗೂ ಲೆಕ್ಕಪತ್ರವನ್ನು ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಮಂಡಿಸಿದರು. ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು.
ಸಂಘದ 2024-25ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘಟನೆ ಗೌರವಾಧ್ಯಕ್ಷರನ್ನಾಗಿ ಎ.ಆರ್. ಸುಬ್ಬಯ್ಯಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು. ರವಿ ನಾಯ್ಕಾಪು ಅಧ್ಯಕ್ಷ, ಪುರುಷೋತ್ತಮ ಪೆರ್ಲ ಉಪಾಧ್ಯಕ್ಷ, ಗಂಗಾಧರ ತೆಕ್ಕೆಮೂಲೆ ಪ್ರಧಾನ ಕಾರ್ಯದರ್ಶಿ, ಸ್ಟಿಫನ್ ಕ್ರಾಸ್ತಾ ಕಯ್ಯಾರ್ ಮತ್ತು ಶ್ಯಾಂ ಪ್ರಸಾದ್ ಸರಳಿ ಜತೆ ಕಾರ್ಯದರ್ಶಿಗಳು, ಕೋಶಾಧಿಕಾರಿಯಾಗಿ ಶ್ರೀಕಾಂತ್ ನೆಟ್ಟಣಿಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಚ್ಯುತ ಚೇವಾರ್, ಪ್ರದೀಪ್ ಕುಮಾರ್ ಬೇಕಲ್, ವೇಣುಗೋಪಾಲ್ ಶೇಣಿ, ಥಾಮಸ್ ಡಿ.ಸೋಜ, ವಿದ್ಯಾಗಣೇಶ್, ರಾಜಶೇಖರ್, ಜೆಡ್.ಎ ಕಯ್ಯಾರ್ ಅವರನ್ನು ಆಯ್ಕೆ ಮಾಡಲಾಯಿತು. ಗಂಗಾಧರ ಯಾದವ್ ಸ್ವಾಗತಿಸಿ, ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು.