ಮೊಕೊಕ್ಚುಂಗ್: ದೆಹಲಿಯಲ್ಲಿ ರಾಹುಲ್ ಗಾಂಧಿ ಎಂಬ ಸೈನಿಕನಿದ್ದಾನೆ, ನಿಮ್ಮ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮಂಡಿಸಲು ಆತ ಸದಾ ಸಿದ್ಧನಿರುತ್ತಾನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾರತ್ ಜೋಡೊ ನ್ಯಾಯ ಯಾತ್ರೆಯ ನಾಲ್ಕನೇ ದಿನವಾದ ಇಂದು ನಾಗಾಲ್ಯಾಂಡ್ನ ಮೊಕೊಕ್ಚುಂಗ್ನ ಜನರೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿದರು.
ಈ ವೇಳೆ ಬೈಕ್ ಸವಾರರ ಜೊತೆ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ.
'ನಾಗಾ ಶಾಂತಿ ಒಪ್ಪಂದದ ಕುರಿತಂತೆ ಪ್ರಧಾನಿ ಮೋದಿ ನಾಗಾಲ್ಯಾಂಡ್ ಜನರಿಗೆ ಸುಳ್ಳು ಭರವಸೆ ನೀಡಿ ದ್ರೋಹ ಬಗೆದಿದ್ದಾರೆ. ನಿಮ್ಮ ಬಳಿ ಸಮಸ್ಯೆಗೆ ಪರಿಹಾರವಿಲ್ಲದಿದ್ದರೆ, ಇದೆ ಎನ್ನುವ ಹಾಗೆ ನಾಟಕ ಮಾಡಬೇಡಿ' ಎಂದು ಟೀಕಿಸಿದರು.
'ಒಬ್ಬ ಭಾರತೀಯನಾಗಿ ನಮ್ಮ ಪ್ರಧಾನಿ ಮಣಿಪುರಕ್ಕೆ ಹೋಗದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ಅಭಿವೃದ್ಧಿಯಿಂದ ದೂರ ಉಳಿದಿವೆ. ಇವುಗಳನ್ನು ಮುನ್ನೆಲೆಗೆ ತರುವುದೇ ಕಾಂಗ್ರೆಸ್ನ ಆಶಯವಾಗಿದೆ' ಎಂದು ಹೇಳಿದರು.
'ಬಿಜೆಪಿಯ ರಾಜಕೀಯ ಕುತಂತ್ರದಿಂದ ಮಣಿಪುರ ಛಿಧ್ರವಾಯಿತು. ದಂಗೆ ಎಬ್ಬಿಸುವ ಮೂಲಕ ಇಡೀ ರಾಜ್ಯವನ್ನೇ ಸುಟ್ಟು ಹಾಕಲಾಯಿತು. ಆದರೆ ಆ ರಾಜ್ಯಕ್ಕೆ ಕಾಲಿಡಲು ಪ್ರಧಾನಿಗೆ ಸಾಧ್ಯವಾಗಲಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದರು.
'ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಒಂದು ಮಗುವಿನ ಜೊತೆ ಎಲ್ಲ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ನಾಗಾಲ್ಯಾಂಡ್ನ ಒಂದು ಮಗು ಸ್ಪರ್ಧಿಸಲು ಸಾಧ್ಯವೇ?' ಎಂದು ನಾಗಾಲ್ಯಾಂಡ್ನ ಪರಿಸ್ಥಿತಿಯ ಬಗ್ಗೆ ಮಾತನಾಡಿದರು.
'ಇಡೀ ದೇಶದ ವ್ಯವಹಾರ ಕೇವಲ ಎರಡ್ಮೂರು ಜನರಿಂದ ನಡೆಯುತ್ತಿದೆ' ಎಂದು ಕಿಡಿಕಾರಿದರು.