ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ಇಂದು ( ಭಾನುವಾರ) ರಾಜೀನಾಮೆ ಸಲ್ಲಿಸಿದ್ದಾರೆ.
ತಮ್ಮ ನಿವಾಸದಲ್ಲಿ ಜೆಡಿಯು ಶಾಸಕರ ಸಭೆ ನಡೆಸಿದ ಅವರು, ಬಳಿಕ ನೇರ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಕೀಯ ಸಾಧ್ಯಾಸಾಧ್ಯತೆಗಳು:
ಸಾಧ್ಯತೆ 1: ಜೆಡಿಯು ಬಿಜೆಪಿಯೊಂದಿಗೆ ಕೈಜೋಡಿಸಿ ಶೀಘ್ರದಲ್ಲಿ ಸರ್ಕಾರ ರಚಿಸಬಹುದು. ನಿತೀಶ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಬಹುದು. ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸಬಹುದು. ಬಿಜೆಪಿಯು ಸುಶೀಲ್ ಕುಮಾರ್ ಮೋದಿ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸಲಿದೆಯೇ ಎಂಬುದನ್ನು ಕಾದುನೋಡಬೇಕು. ಜೆಡಿಯು ಮತ್ತು ಬಿಜೆಪಿ ಬಹುಮತ ಪಡೆಯಬಹುದು ಹಾಗೂ ಸರ್ಕಾರವನ್ನು ಇನ್ನಷ್ಟು ಸುಭದ್ರಗೊಳಿಸಲು ಕಾಂಗ್ರೆಸ್‌ನ ಕೆಲವು ಶಾಸಕರನ್ನು ಸೆಳೆಯಬಹುದು.
ಸಾಧ್ಯತೆ 2: ನಿತೀಶ್ ಅವರು ಎನ್‌ಡಿಎ ಸೇರಬಹುದು. ಆರ್‌ಜೆಡಿ ಮತ್ತು ಕಾಂಗ್ರೆಸ್ ಪಕ್ಷಗಳು ಜೆಡಿಯುವಿನ ಕೆಲವು ಶಾಸಕರನ್ನು ಪಕ್ಷಾಂತರ ಮಾಡಲು ಸಫಲವಾಗಬಹುದು. ಕಾಂಗ್ರೆಸ್- ಆರ್‌ಜೆಡಿ ಮಿತ್ರಕೂಟಕ್ಕೆ ಬಹುಮತಕ್ಕೆ ಬೇಕಿರುವ 122 ಸ್ಥಾನಗಳನ್ನು ಪಡೆಯಲು ಏಳು ಶಾಸಕರ ಕೊರತೆ ಇದೆ. ಜೆಡಿಯು ಶಾಸಕರ ಪ್ರಯತ್ನದಲ್ಲಿ ಸಫಲರಾದರೆ ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಬಹುದು. ಸ್ಪೀಕರ್ ಆರ್‌ಜೆಡಿಗೆ ಸೇರಿದವರು ಇರುವುದರಿಂದ ಜೆಡಿಯು ಹಾಗೂ ಬಿಜೆಪಿಗೆ ಪರಿಸ್ಥಿತಿ ನಿಭಾಯಿಸುವುದು ಕಠಿಣ ಆಗಬಹುದು.
ಸಾಧ್ಯತೆ 3: ಜಿತೇನ್ ರಾಮ್ ಮಾಂಝಿ ಅವರ ಎಚ್‌ಎಎಂ ಅನ್ನು ಮೈತ್ರಿಕೂಟಕ್ಕೆ ಸೆಳೆಯುವ ಪ್ರಯತ್ನದಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ನಿರತವಾಗಿದೆ. ಉಪಮುಖ್ಯಮಂತ್ರಿ ಸ್ಥಾನವನ್ನು ಎಚ್‌ಎಎಂಗೆ ನೀಡುವ ಸಂಭವ ಇದೆ. ಅದಲ್ಲದೆ, ಮಾಂಝಿ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವ ಆಮಿಷ ಒಡ್ಡಲಾಗಿದೆ ಎಂಬ ವರದಿಗಳಿವೆ. ಇದು ಸಾಧ್ಯವಾದರೆ, 10 ವರ್ಷಗಳ ಬಳಿಕ ಮಾಂಝಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ.
ಸಾಧ್ಯತೆ 4: ಪಕ್ಷಾಂತರ ನಡೆದು ಒಂದು ವೇಳೆ ಮತ್ತೆ ಅಧಿಕಾರಕ್ಕೆ ಏರಲು ಸಾಧ್ಯವಾಗದಿದ್ದರೆ ನಿತೀಶ್ ಅವರು ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. 17ನೇ ವಿಧಾನಸಭೆಯ ಅವಧಿ 2025ರ ನವೆಂಬರ್ ವರೆಗೆ ಇದೆ. ಅಂತಹ ಸನ್ನಿವೇಶ ಎದುರಾದಲ್ಲಿ, ಸರ್ಕಾರ ರಚನೆ ಕೆಲ ಕಾಲ ವಿಳಂಬವಾಗಬಹುದು. ನಿತೀಶ್ ಅವರು ತಕ್ಷಣ ಚುನಾವಣೆಗೆ ಹೋಗಲು ಒಲವು ಹೊಂದಿದ್ದಾರೆ. ಆದರೆ, ಆರ್‌ಜೆಡಿ ಉತ್ಸುಕವಾಗಿಲ್ಲ.