ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬಣಗಳ ನಡುವಿನ ವಾಕ್ಸಮರ ಈಗ ಪವಾರ್ ಕುಟುಂಬದಲ್ಲಿ ವೈಯಕ್ತಿಕ ಮಟ್ಟಕ್ಕೆ ಇಳಿದಿದೆ. ಈ ಮೂಲಕ ಪಕ್ಷವು 2024ರ ಲೋಕಸಭೆ ಚುನಾವಣೆಗೆ ಸ್ಥಿತ್ಯಂತರಗೊಂಡಿದೆ.
ಉಭಯ ಬಣಗಳ ಮುಖಂಡರ ನಡುವಿನ ವಾಕ್ಸಮರದ ಹಿನ್ನೆಲೆಯಲ್ಲಿ ಪುಣೆ ಮತ್ತು ಬಾರಾಮತಿಯಲ್ಲಿ ರಾಜಕಾರಣದ ಸ್ವರೂಪವೇ ಬದಲಾಗಲಿದೆ.
ವಿರೋಧಪಕ್ಷಗಳ ಮೈತ್ರಿಕೂಟ 'ಇಂಡಿಯಾ'ದ ಪ್ರಮುಖ ನಾಯಕರಾಗಿರುವ ಶರದ್ ಪವಾರ್ ಅವರು, ಪ್ರಸ್ತುತ ಬಿಜೆಪಿಯ ಕಾರ್ಯತಂತ್ರದ ಫಲವಾಗಿ ಇಬ್ಭಾಗಗೊಂಡಿರುವ ಎನ್‌ಸಿಪಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ.
ಪವಾರ್ ಅವರ ಸಂಬಂಧಿಯೂ ಆಗಿರುವ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಸದ್ಯ, ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಎನ್‌ಡಿಎ ಜೊತೆಗೆ ಗುರುತಿಸಿಕೊಂಡಿದ್ದಾರೆ.
ವರಿಷ್ಠ ಶರದ್ ಪವಾರ್ ಹಾಗೂ ಅವರ ಬಣದಲ್ಲಿರುವ ದಾಯಾದಿ, ಶಾಸಕ ರೋಹಿತ್ ಪವಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಹ್ಮದ್‌ನಗರ ಜಿಲ್ಲೆಯ ಕರ್ಜಾತ್ ಜಾಮ್‌ಖೇಡ್ ಕ್ಷೇತ್ರದ ಶಾಸಕರಾದ ರೋಹಿತ್ ಪವಾರ್, ಪಕ್ಷ ಇಬ್ಭಾಗವಾದ ಹೊತ್ತಿನಲ್ಲಿ ಅಜಿತ್ ಪವಾರ್ ಅವರೊಂದಿಗೆ ಗುರುತಿಸಿಕೊಳ್ಳಲು ನಿರಾಕರಿಸಿದ್ದರು.
ಶರದ್‌ಪವಾರ್ ಅವರನ್ನು ಉಲ್ಲೇಖಿಸಿ, 'ನಿರ್ದಿಷ್ಟ ವಯಸ್ಸು ತಲುಪಿದ ಬಳಿಕ ಜನರು ವಿರಮಿಸಬೇಕು. ಇಂಥ ಸಂಪ್ರದಾಯ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಆದರೆ, ಕೆಲವರು ಇದನ್ನು ಕೇಳಿಸಿಕೊಳ್ಳಲು ಸಿದ್ಧರಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದರು.
ಅಂತೆಯೇ ರೋಹಿತ್ ಪವಾರ್ ಅವರನ್ನು ಉಲ್ಲೇಖಿಸಿ, 'ಆತನಿನ್ನೂ ಹುಡುಗ. ಆತನ ಹೇಳಿಕೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಪ್ರತಿಕ್ರಿಯಿಸುವಷ್ಟು ಆತ ಬೆಳೆದಿಲ್ಲ' ಎಂದು ಹೇಳಿದ್ದರು.
ಈ ಮಾತುಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರ ಪುತ್ರಿ, ಸಂಸದೆ ಸುಪ್ರಿಯಾ ಸುಳೆ, 'ಅಜಿತ್ ಪವಾರ್ ಅವರಿಗೆ 65 ವರ್ಷವಾಗಿದ್ದು, ಅವರೇ ಹಿರಿಯ ನಾಗರಿಕರಾಗಿದ್ದಾರೆ' ಎಂದು ಹೇಳಿದ್ದಾರೆ.