ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ತನ್ನ ಸಹಜ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆದಿರುವ ಹನಿ ರೋಸ್ ಬಗ್ಗೆ ಸಿನಿಮಾ ವಿಮರ್ಶಕ ಮತ್ತು ಯೂಟ್ಯೂಬರ್ ಸಂತೋಷ್ ವಾರ್ಕಿ ಆಡಿರುವ ಮಾತುಗಳು ಭಾರಿ ವಿವಾದವನ್ನು ಹುಟ್ಟುಹಾಕಿದೆ. ಅಂದಹಾಗೆ ಈ ಸಂತೋಷ್ ವಾರ್ಕಿ, ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಮುಖ. ಅವರು ಮೋಹನ್ಲಾಲ್ ಅಭಿಮಾನಿಯಾಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ.
ಇತ್ತೀಚೆಗಷ್ಟೇ ಸಂತೋಷ್ ವಾರ್ಕಿ, ಕಾರ್ಯಕ್ರಮವೊಂದರಲ್ಲಿ ಹನಿರೋಸ್ ಭೇಟಿಯಾಗಿದ್ದರು. ಈ ವೇಳೆ ಹನಿ ರೋಸ್ ಎದ್ದು ನಿಂತು ಸಂತೋಷ್ಗೆ ಶೇಕ್ ಹ್ಯಾಂಡ್ ನೀಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದೇ ಸಂದರ್ಭದಲ್ಲಿ ಸಂತೋಷ್, ಹನಿ ರೋಸ್ ಬಗ್ಗೆ ಮಾತನಾಡಿರುವ ಇನ್ನೊಂದು ವಿಡಿಯೋ ಕೆಟ್ಟ ಕಾರಣಕ್ಕೆ ವೈರಲ್ ಆಗಿದೆ.
ವಿಡಿಯೋದಲ್ಲಿ ಸಂತೋಷ್ ಏನು ಹೇಳಿದ್ದಾರೆ ಅಂದರೆ, ಹನಿ ರೋಸ್ ನೋಡಲು ತುಂಬಾ ಹಾಟ್ ಮತ್ತು ಸೆಕ್ಸಿ ಎಂದಿದ್ದಾರೆ. ನಮ್ಮ ಇಂದ್ರಿಯಗಳನ್ನು ಕೆರಳಿಸುವ ದೇಹದ ಆಕಾರವನ್ನು ಹೊಂದಿದ್ದಾರೆ ಎನ್ನುವ ಮೂಲಕ ಹನಿ ರೋಸ್ ಅವರ ನಿತಂಬ ಮತ್ತು ಎದೆಯ ಬಗ್ಗೆ ಕಾಮದ ಮಾತುಗಳನ್ನಾಡಿದ್ದಾರೆ. ನಮ್ಮ ಭಾವನೆಗಳನ್ನು ಕೆರಳಿಸುವಂತಹ ಪಾತ್ರಗಳನ್ನು ಹನಿ ರೋಸ್ ಮಾಡುತ್ತಿದ್ದಾರೆ. ಅವರು ಮುಂದಿನ ಸಿಲ್ಕ್ ಸ್ಮಿತಾ ಆಗಲಿದ್ದಾರೆ. ಇದಿಷ್ಟೇ ಅಲ್ಲದೆ, ಹನಿ ರೋಸ್ ಯುವಕರನ್ನು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಯಾವಾಗ ಈ ವಿಡಿಯೋ ವೈರಲ್ ಆಗಿ ವಿವಾದ ಹುಟ್ಟು ಹಾಕಿತೋ ಸಂತೋಷ್ ವಾರ್ಕಿ ತಕ್ಷಣವೇ ವಿಡಿಯೋ ಡಿಲೀಟ್ ಮಾಡಿದ್ದಾನೆ. ಆದರೆ, ಹನಿ ರೋಸ್ ಅಭಿಮಾನಿಗಳ ಕೆಂಗಣ್ಣಿಗೆ ಸಂತೋಷ್ ಗುರಿಯಾಗಿದ್ದು, ಅವರ ವಿರುದ್ಧ ದೂರು ದಾಖಲಿಸುವಂತೆ ನಟಿಯನ್ನು ಒತ್ತಾಯಿಸಿದ್ದಾರೆ.
ನಿತ್ಯಾ ಮೆನನ್ಗೂ ಕಿರುಕುಳ
ಈ ಹಿಂದೆ ಒಮ್ಮೆ ಸಂತೋಷ್ ಭಾರಿ ಸುದ್ದಿಯಾಗಿದ್ದ. ಮದುವೆ ಆಗಲು ಅನುಮತಿ ಕೇಳಲು ನಿತ್ಯಾ ಮನೆಗೆ ಹೋಗಿದ್ದರು ಎಂದು ಸುದ್ದಿಯಾಗಿತ್ತು. ಮದುವೆ ಆಗುತ್ತೇನೆ ಅಂತಿದ್ದ ಸಂತೋಷ್ ಕೆಲ ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟ್ ಮಾಡಿ, ನಿತ್ಯಾ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಾನು ಇನ್ನೆಂದಿಗೂ ನಿತ್ಯಾ ಮೆನನ್ ಅವರನ್ನು ಮದುವೆ ಆಗುವುದಿಲ್ಲ. ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕೊಡಬಹುದಿತ್ತು ಎಂದು ಬರೆದುಕೊಂಡಿದ್ದ. ತನ್ನ ನಿಜವಾದ ಪ್ರೀತಿಯನ್ನು ಅರಿತುಕೊಳ್ಳದ ನಿತ್ಯಾ ಒಂದಲ್ಲ ಒಮ್ಮೆ ಪಶ್ಚಾತ್ತಾಪ ಪಡುತ್ತಾಳೆ. ಅವಳು ನನಗೆ ಅರ್ಹಳಲ್ಲ ಎಂದು ಪೋಸ್ಟ್ ಮೂಲಕ ನಿತ್ಯಾರನ್ನು ಸಂತೋಷ್ ಟೀಕಿಸಿದ್ದರು.
ನಿತ್ಯಾ ಮೆನನ್ ಪ್ರತಿಕ್ರಿಯೆ
ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿದ್ದ ನಿತ್ಯಾ, ಸಂತೋಷ್ ವಾರ್ಕಿ ಹೆಸರೇಳದೆ ಗಂಭೀರ ಆರೋಪ ಮಾಡಿದ್ದರು. ನಾನು ಸಹಿಸಲಾಗದಷ್ಟು ಕಿರುಕುಳವನ್ನು ಎದುರಿಸಿದ್ದೇನೆ. ಬಹಳ ಸಮಯದಿಂದಲೂ ಆತ ತುಂಬಾ ಕಿರುಕುಳ ನೀಡುತ್ತಿದ್ದ. ಆತ ವೈರಲ್ ಆದ ಬಳಿಕ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ. ಕಳೆದ 6 ವರ್ಷಗಳಿಂದ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಿದ್ದಾನೆ. ನನ್ನ ಪಾಲಕರನ್ನು ಹೆಸರನ್ನು ಉಲ್ಲೇಖಿಸುವ ಮೂಲಕ ಅವರಿಗೆ ಹಿಂಸೆ ಕೊಟ್ಟಿದ್ದಾನೆ. ತುಂಬಾ ಕ್ರೂರವಾಗಿ ಮಾತನಾಡುತ್ತಿದ್ದಾನೆ. ಈವರೆಗೂ ಆತನ 30ಕ್ಕೂ ಹೆಚ್ಚು ನಂಬರ್ಗಳನ್ನು ಬ್ಲಾಕ್ ಮಾಡಿದ್ದೇನೆ. ಅವನನ್ನು ನಂಬುವವರು ಮತ್ತು ಆತನ ಮಾತುಗಳನ್ನು ನಂಬುವವರು ನಿಜವಾಗಿಯೂ ಮೂರ್ಖರು. ಆತನ ವಿರುದ್ಧ ದೂರು ನೀಡುವಂತೆ ಅನೇಕರು ಹೇಳಿದರು. ಆದರೆ, ಬೇಡ ಎಂದು ಆತನನ್ನು ಕ್ಷಮಿಸಿದ್ದೇನೆ ಎಂದು ನಿತ್ಯಾ ಅಸಮಾಧಾನಾ ಹೊರಹಾಕಿದ್ದರು.
ನಿತ್ಯಾ ಆರೋಪಕ್ಕೂ ತಿರುಗೇಟು
ನಿತ್ಯಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಂತೋಷ್ ವಾರ್ಕಿ, ನಾನು 30ಕ್ಕೂ ಹೆಚ್ಚು ನಂಬರ್ನಿಂದ ಕರೆ ಮಾಡಿ ಕಿರುಕುಳ ನೀಡಿರುವುದಾಗಿ ನಿತ್ಯಾ ಹೇಳಿದ್ದಾರೆ. ಆದರೆ, ಓರ್ವ ವ್ಯಕ್ತಿ ತನ್ನ ಹೆಸರಲ್ಲಿ ಎಷ್ಟು ಸಿಮ್ಗಳನ್ನು ತೆಗೆದುಕೊಳ್ಳಬಹುದು ಎಂದು ಜನರೇ ಯೋಚಿಸುತ್ತಾರೆ. ನಿತ್ಯಾ ಈಗಾಗಲೇ ಪ್ರೀತಿಯಲ್ಲಿ ಇರುವ ಬಗ್ಗೆ ಅವರ ತಾಯಿ ಹೇಳಿದ್ದಾರೆ. ಆದರೆ, ಆಕೆ ಯಾರೊಂದಿಗೂ ಎಂಗೇಜ್ ಆಗಿಲ್ಲ ಎಂದು ಅವರ ತಂದೆ ಹೇಳುತ್ತಾರೆ. ಅವರ ಮನೆಯಲ್ಲಿ ವಿಭಿನ್ನ ಅಭಿಪ್ರಾಯ ಇರುವುದನ್ನು ನೋಡಿ ನಾನು ಗೊಂದಲಕ್ಕೆ ಒಳಗಾದೆ. ನನ್ನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸುತ್ತಾರೆ ಎಂಬುದು ನನಗೆ ತಿಳಿದಿದೆ. ನನ್ನ ತಂದೆ ಮರಣದ ನಂತರ ನಾನು ಯಾರ ತಂಟೆಗು ಹೋಗದೆ ನನ್ನ ಪಾಡಿಗೆ ನಾನು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಅವಳ ಬಗ್ಗೆ ಮೊದಲೇ ನನಗೆ ತಿಳಿದಿದ್ದರೆ, ನಾನು ಅವಳನ್ನು ಪ್ರೀತಿಸುತ್ತಿರಲಿಲ್ಲ ಮತ್ತು ಅವಳನ್ನು ಹಿಂಬಾಲಿಸುತ್ತಿರಲಿಲ್ಲ ಎಂದು ಸಂತೋಷ್ ಹೇಳಿದ್ದರು.