ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ ಪಾರದರ್ಶಕ ವ್ಯವಸ್ಥೆ, ಪ್ರಾಮಾಣಿಕ ಪ್ರಯತ್ನ, ಸಾರ್ವಜನಿಕರ ಸಹಭಾಗಿತ್ವದ ಪರಿಣಾಮವಾಗಿ ಈ ಒಂಬತ್ತು ವರ್ಷಗಳಲ್ಲಿ ದೇಶದ 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯ ಫಲಾನುಭವಿಗಳೊಂದಿಗೆ ವರ್ಚುವಲ್ ಆಗಿ ಸಂವಾದ ನಡೆಸಿದ ಅವರು, 'ಭಾರತದಲ್ಲಿ ಬಡತನ ಕಡಿಮೆಯಾಗುವ ಬಗ್ಗೆ ಯಾರೂ ಯೋಚನೆ ಮಾಡಿರಲಿಲ್ಲ. ಆದರೆ, ಸಂಪನ್ಮೂಲ ಒದಗಿಸಿಕೊಟ್ಟರೆ ಬಡತನ ನಿರ್ಮೂಲನೆ ಸಾಧ್ಯವಿದೆ ಎಂಬುದನ್ನು ಜನ ತೋರಿಸಿದ್ದಾರೆ' ಎಂದರು.
ಬಡತನ ಇಳಿಕೆಯಾಗಿರುವ ಕುರಿತ ನೀತಿ ಆಯೋಗದ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, 'ನೀತಿ ಆಯೋಗದ ವರದಿಯು ಪ್ರೋತ್ಸಾಹದಾಯಕ. ಬಡವರಿಗೆ ನೆರವಾಗುವ ವಿಚಾರದಲ್ಲಿ ಭಾರತವು ಇತರ ರಾಷ್ಟ್ರಗಳಿಗೆ ಮಾದರಿಯೊಂದನ್ನು ಮುಂದಿಟ್ಟಿದೆ. ಈ ಮೂಲಕ ಜಗತ್ತಿನ ಗಮನ ಸೆಳೆದಿದೆ' ಎಂದು ಅಭಿಪ್ರಾಯಪಟ್ಟರು.
'ವಿಕಸಿತ ಭಾರತ ಸಂಕಲ್ಪಯಾತ್ರೆಯು ನನ್ನ ಊಹೆಗೂ ಮೀರಿದ ಯಶಸ್ಸು ಸಾಧಿಸಿದೆ. ಸರ್ಕಾರದ ಕಲ್ಯಾಣ ಕಲ್ಯಾಣ ಕಾರ್ಯಕ್ರಮಗಳಿಗೆ ನೋಂದಣಿ ಮಾಡಿಕೊಳ್ಳಲು ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹೀಗಾಗಿ ನೋಂದಣಿಯ ಅಂತಿಮ ದಿನವನ್ನು (ಜ.26) ವಿಸ್ತರಿಸಲಾಗುವುದು. ಕಲ್ಯಾಣ ಯೋಜನೆಗಳನ್ನು ಪ್ರಚಾರ ಮಾಡಲು ಮತ್ತು ಹೆಚ್ಚಿನ ಫಲಾನುಭವಿಗಳನ್ನು ತಲುಪಲು ಯಾತ್ರೆಯ ವಾಹನಗಳು ತಮ್ಮ ಸ್ಥಳಗಳಿಗೂ ಬರಬೇಕು ಎಂದು ಜನಸಾಮಾನ್ಯರಿಂದ ಬೇಡಿಕೆ ಹೆಚ್ಚುತ್ತಿದೆ. ಎರಡು ತಿಂಗಳಲ್ಲಿ ಯಾತ್ರೆಯು ಭಾರಿ ಯಶಸ್ಸು ಕಂಡಿದೆ. ಯಾತ್ರೆಯು ಈಗಾಗಲೇ ಶೇ 70-80 ರಷ್ಟು ಪಂಚಾಯಿತಿಗಳನ್ನು ತಲುಪಿದೆ' ಎಂದರು.
'ಭಾರತ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಜನರ ಆತ್ಮವಿಶ್ವಾಸ, ಸರ್ಕಾರದ ಮೇಲಿನ ಅವರ ವಿಶ್ವಾಸ, ಹೊಸ ಭಾರತವನ್ನು ನಿರ್ಮಾಣ ಮಾಡಬೇಕೆಂಬ ಅವರ ಸಂಕಲ್ಪ ಎಲ್ಲೆಡೆ ಸ್ಪಷ್ಟವಾಗಿ ಗೋಚರಿಸುತ್ತಿದೆ' ಎಂದು ಮೋದಿ ಹೇಳಿದರು.
ಬಡವರಿಂದ ಸವಲತ್ತು ಕಸಿಯಲು ಸಂಚು: ಕಾಂಗ್ರೆಸ್
'ಭಾರತದಲ್ಲಿ ಬಡತನ ಇಳಿಕೆ ಕಂಡಿದೆ ಎಂಬ ನೀತಿ ಆಯೋಗದ ವರದಿಯನ್ನು ಕಾಂಗ್ರೆಸ್ ಪಕ್ಷವು 'ಜುಮ್ಲಾ' ಎಂದು ಗೇಲಿ ಮಾಡಿದೆ. ಬಡವರನ್ನು ಕಲ್ಯಾಣ ಯೋಜನೆಗಳ ರಕ್ಷಾ ಕವಚದಿಂದ ಹೊರಗಿಡಲು ಮತ್ತು ಉಚಿತ ಪಡಿತರ ವ್ಯವಸ್ಥೆಯಿಂದ ದೂರವಿಡಲು ಪಿತೂರಿ ನಡೆಸಿದೆ' ಎಂದು ದೂರಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನೇತ್ 'ನೀತಿ ಆಯೋಗ ಈ ಸಂಖ್ಯೆಗಳನ್ನು ಹೇಗೆ ಸೃಷ್ಟಿ ಮಾಡಿತೊ ತಿಳಿಯುತ್ತಿಲ್ಲ. ಬಡತನವನ್ನು ಲೆಕ್ಕ ಹಾಕುವ ಮಾನದಂಡವನ್ನು ನೀತಿ ಆಯೋಗ ಬದಲಿಸಿದೆ. ವಿಶ್ವ ಬ್ಯಾಂಕ್ ಆಗಲಿ ಐಎಂಎಫ್ (ಅಂತರಾಷ್ಟ್ರೀಯ ಹಣಕಾಸು ನಿಧಿ) ವರದಿಯನ್ನು ಅನುಮೋದಿಸಿಲ್ಲ. ಇದು ಬರಿ ನೀತಿ ಆಯೋಗದ ವರದಿ ಮಾತ್ರ. ಸಮೀಕ್ಷೆ ವರದಿಯನ್ನು ಆಯೋಗವೇ ಸಿದ್ಧಪಡಿಸಿದೆ. ಇದು ಬಿಜೆಪಿಯ ಸುಳ್ಳಿನ ಕಂತೆ. ವಾಸ್ತವವೇ ಬೇರೆ ಇದೆ' ಎಂದು ಟೀಕಿಸಿದ್ದಾರೆ. 'ದೇಶದಲ್ಲಿ ನಿರುದ್ಯೋಗ ಇಲ್ಲ ಎಂದು ವರದಿ ಹೇಳಿದೆ. ಆದರೆ ಬೆಲೆ ಏರಿಕೆ ನಿರುದ್ಯೋಗ ಆದಾಯ ಅಸಮಾನತೆ ಕಡಿಮೆ ಸಂಬಳ ವಿಪರೀತ ಬಡತನ ಎಂಬುದು ಕಣ್ಣಿಗೆ ರಾಚುತ್ತಿವೆ' ಎಂದು ಟೀಕಿಸಿದ್ದಾರೆ.