ನವದೆಹಲಿ :ಕೇಂದ್ರ ಸರ್ಕಾರದಿಂದ ಬಂದ "ಕಾನೂನಾತ್ಮಕ ಆಗ್ರಹದ" ಹಿನ್ನೆಲೆಯಲ್ಲಿ ಹಿಂದುತ್ವ ವಾಚ್ ಸಂಸ್ಥೆಯ ʼಎಕ್ಸ್ʼ (ಟ್ವಿಟರ್) ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ಜನವರಿ 16ರ ಸಂಜೆ ಈ ಕ್ರಮಕೈಗೊಳ್ಳಲಾಗಿದೆ. ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಿದ ಮೂರು ಗಂಟೆಗಳ ತರುವಾಯ ತಮಗೆ ಈ ಕುರಿತು ಮಾಹಿತಿ ನೀಡಲಾಯಿತು ಎಂದು ಸಂಸ್ಥೆಯ ಸ್ಥಾಪಕ ರಖೀಬ್ ಹಮೀದ್ ನಾಯ್ಕ್ ಹೇಳಿದ್ದಾರೆ.
"ಈ ಕೆಳಗಿನ ಕಂಟೆಂಟ್ ಭಾರತದ ಐಟಿ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಭಾರತ ಸರ್ಕಾರ ಹೇಳಿರುವುದರಿಂದ ನಿಮ್ಮ ಎಕ್ಸ್ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗುತ್ತಿದೆ," ಎಂದು ಸಂಸ್ಥೆಗೆ ದೊರೆತ ಇಮೇಲ್ನಲ್ಲಿ ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಖೀಬ್ ಹಮೀದ್, "ಇದು ಆಘಾತಕಾರಿಯಾದರೂ. , ಸ್ವತಂತ್ರ ಮಾಧ್ಯಮ ಮತ್ತು ಅಸಮ್ಮತಿಯ ದನಿಗಳನ್ನು ಹತ್ತಿಕ್ಕುವ ಪ್ರಧಾನಿ ಮೋದಿಯ ಆಡಳಿತದಡಿಯಲ್ಲಿ ಇದು ಅಚ್ಚರಿಯ ಕ್ರಮವೇನಲ್ಲ. ಇದರಿಂದ ನಮ್ಮನ್ನು ಹತ್ತಿಕ್ಕಲಾಗದು. ಭಾರತದಲ್ಲಿ ನಮ್ಮ ಖಾತೆಗೆ ಹೇರಿರುವ ತಡೆ ನಮ್ಮ ಕೆಲಸದಲ್ಲಿ ಇನ್ನಷ್ಟು ಬದ್ಧತೆಯಿಂದ ನಿರ್ವಹಿಸಲು ನಮಗೆ ಶಕ್ತಿ ನೀಡಿದೆ," ಎಂದು ಹೇಳಿದ್ದಾರೆ.
ಹಿಂದುತ್ವ ಸಂಘಟನೆಗಳಿಂದ ಅಲ್ಪಸಂಖ್ಯಾತರು ಮತ್ತು ಇತರ ದುರ್ಬಲ ಸಮುದಾಯಗಳ ಮೇಲೆ ನಡೆಯುವ ದಾಳಿಗಳ ಮೇಲೆ ನಿಗಾ ಇರಿಸಿ ಹಿಂಸೆ ಮತ್ತು ಅನ್ಯಾಯ ನಡೆಸುವ ಜನರು ಮತ್ತು ಸಂಸ್ಥೆಗಳನ್ನು ಬಯಲುಗೊಳಿಸುವ ಉದ್ದೇಶ ತನಿಗೆ ಎಂದು ಹಿಂದುತ್ವ ವಾಚ್ ಹೇಳಿಕೊಳ್ಳುತ್ತದೆ.