ತಿರುವನಂತಪುರಂ: ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲು ʼಭಾರತʼ ಪದ ಬಳಸಬೇಕೆಂಬ ಎನ್‌ಸಿಇಆರ್‌ಟಿ ಸಮಿತಿಯ ಇತ್ತೀಚಿನ ಶಿಫಾರಸನ್ನು ಮರುಪರಿಶೀಲಿಸಬೇಕೆಂದು ಕೋರಿ ಕೇರಳ ಸರ್ಕಾರ ಮುಂದಿಟ್ಟ ಆಗ್ರಹವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರಸ್ಕರಿಸಿದ್ದಾರೆ.
ಎರಡೂ ಹೆಸರುಗಳನ್ನು ಸಂವಿಧಾನ ಮಾನ್ಯ ಮಾಡುತ್ತದೆ ಎಂದು ಸಚಿವರು ಹೇಳಿದರೆಂದು ಮೂಲಗಳು ತಿಳಿಸಿವೆ.
ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರ ಪತ್ರಕ್ಕೆ ಉತ್ತರಿಸುವ ವೇಳೆ ಕೇಂದ್ರ ಸಚಿವರು ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲು ಭಾರತ ಬಳಸಬೇಕೆಂದು ಎನ್‌ಸಿಇಆರ್‌ಟಿ ನೇಮಿತ ಸಮಾಜಶಾಸ್ತ್ರ ಸಮಿತಿಯ ಶಿಫಾರಸನ್ನು ಸಮರ್ಥಿಸಿರುವ ಸಚಿವರು, ಈ ಸ್ವಾಯತ್ತ ಸಮಿತಿಯು ಇಂಡಿಯಾ ಮತ್ತು ಭಾರತ ಎರಡೂ ಸ್ವೀಕಾರಾರ್ಹ ಎಂದು ಪರಿಗಣಿಸುತ್ತದೆ ಮತ್ತು ಒಂದು ಇನ್ನೊಂದಕ್ಕಿಂತ ಮೇಲು ಎಂದು ತಿಳಿಯುವುದಿಲ್ಲ ಎಂದರು.
ಸಂವಿಧಾನದ ವಿಧಿ 1ರಲ್ಲಿ "ಇಂಡಿಯಾ, ದ್ಯಾಟ್ ಈಸ್ ಭಾರತ್, ಶಲ್ ಬಿ ಅ ಯೂನಿಯನ್ ಆಫ್ ಸ್ಟೇಟ್ಸ್" ಎಂದು ಬರೆದಿರುವುದನ್ನು ಪ್ರಧಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಸಂವಿಧಾನವು ದೇಶದ ಅಧಿಕೃತ ಹೆಸರುಗಳಾಗಿ ಇಂಡಿಯಾ ಮತ್ತು ಭಾರತ ಅನ್ನು ಮಾನ್ಯ ಮಾಡುವುದರಿಂದ ಎರಡನ್ನೂ ಬಳಸಬಹುದು ಎಂದು ಅವರು ಹೇಳಿದ್ದಾರೆ.
ಎನ್‌ಸಿಇಆರ್‌ಟಿ ಶಿಫಾರಸು ಕುರಿತಂತೆ ಮಧ್ಯಪ್ರವೇಶಿಸಬೇಕೆಂದು ಕೋರಿ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಶಿವನ್‌ಕುಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಸಚಿವ ಧರ್ಮೇಂದ್ರ ಪ್ರದಾನ್ ಅವರಿಗೆ ಪತ್ರ ಬರೆದಿದ್ದರು.