ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ 2019ರ ನಿಯಮಗಳನ್ನು ಲೋಕಸಭಾ ಚುನಾವಣೆ ಘೋಷಣೆ ಆಗುವ ಬಹಳ ಮೊದಲೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ 2019ರ ನಿಯಮಗಳನ್ನು ಲೋಕಸಭಾ ಚುನಾವಣೆ ಘೋಷಣೆ ಆಗುವ ಬಹಳ ಮೊದಲೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಈ ಕಾಯ್ದೆಯು, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದಿಂದ 2014ರ ಡಿಸೆಂಬರ್ 31ಕ್ಕೆ ಮೊದಲು ಭಾರತಕ್ಕೆ ಬಂದ ಮುಸ್ಲಿಮೇತರ (ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ) ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಕಲ್ಪಿಸುತ್ತದೆ.
ಕಾಯ್ದೆಯನ್ನು ವಿರೋಧಿಸಿ ದೇಶದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. 'ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದ ನಿಯಮಗಳನ್ನು ಶೀಘ್ರವೇ ಅಧಿಸೂಚನೆಯಲ್ಲಿ ಪ್ರಕಟಿಸಲಾಗುವುದು. ಇದಾದ ನಂತರದಲ್ಲಿ, ಕಾಯ್ದೆಯನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆ ಮತ್ತು ಅರ್ಹರಿಗೆ ಭಾರತದ ಪೌರತ್ವ ನೀಡಲು ಸಾಧ್ಯವಾಗುತ್ತದೆ' ಎಂದು ಅಧಿಕಾರಿ ವಿವರಿಸಿದ್ದಾರೆ.
ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸುವವರೆಗೆ ಈ ಕಾಯ್ದೆಯ ಅನುಷ್ಠಾನ ಸಾಧ್ಯವಿಲ್ಲ. 'ನಿಯಮಗಳು ಸಿದ್ಧವಾಗಿವೆ. ಆನ್‌ಲೈನ್ ಪೋರ್ಟಲ್ ಕೂಡ ಸಿದ್ಧವಿದೆ. ಪೌರತ್ವ ಕೋರುವ ಇಡೀ ಪ್ರಕ್ರಿಯೆಯು ಆನ್‌ಲೈನ್ ಮೂಲಕ ನಡೆಯಲಿದೆ. ವಲಸಿಗರು ತಾವು ಪ್ರಯಾಣ ದಾಖಲೆಗಳು ಇಲ್ಲದೆ ಭಾರತಕ್ಕೆ ಬಂದ ವರ್ಷವನ್ನು ನಮೂದಿಸಬೇಕು. ಪೌರತ್ವ ಕೋರಿ ಅರ್ಜಿ ಸಲ್ಲಿಸುವವರಿಂದ ಯಾವುದೇ ದಾಖಲೆಯನ್ನು ಕೇಳುವುದಿಲ್ಲ' ಎಂದು ಅಧಿಕಾರಿ ವಿವರಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್‌ನಲ್ಲಿ ಹೇಳಿದ್ದರು.