ನವದೆಹಲಿ: ಥಿಯೇಟರ್‌ಗಳಲ್ಲಿ ಚಲನಚಿತ್ರಗಳ ಪ್ರದರ್ಶನ ದೃಷ್ಟಿ ಹಾಗೂ ಶ್ರವಣ ದೋಷವುಳ್ಳವರ ಸ್ನೇಹಿಯನ್ನಾಗಿಸುವುದಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳ ಕರಡನ್ನು ಸೋಮವಾರ ಬಿಡುಗಡೆ ಮಾಡಿದೆ.
ಈ ಮಾರ್ಗಸೂಚಿಗಳನ್ನು ಮುಂದಿನ ಆರು ತಿಂಗಳಿಂದ ಮೂರು ವರ್ಷಗಳ ಅವಧಿಯ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದೆ.
ಚಲಚಿತ್ರಗಳನ್ನು ಪ್ರದರ್ಶಿಸುವ ವೇಳೆ ಸಬ್‌ಟೈಟಲ್, ಶೀರ್ಷಿಕೆಗಳನ್ನು ಅಳವಡಿಸುವುದು, ಆಡಿಯೊ ವಿವರಣೆ ನೀಡುವುದು, ಸಂಜ್ಞೆ ಭಾಷೆ ಬಳಸುವುದು ಕಡ್ಡಾಯವಾಗಲಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಫೆಬ್ರುವರಿ 8ರ ಒಳಗಾಗಿ ಎಲ್ಲ ಭಾಗೀದಾರರು ತಮ್ಮ ಅಭಿಪ್ರಾಯ/ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಕೋರಿದೆ.
ಚಲನಚಿತ್ರಗಳಿಗೆ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ಮಾಪಕರು ಚಿತ್ರದ ಎರಡು ಪ್ರತಿಗಳನ್ನು ಸಲ್ಲಿಸಬೇಕು. ಒಂದು ಪ್ರತಿಯು ಸಾಮಾನ್ಯ ಜನರ ವೀಕ್ಷಣೆಗೆ ಹಾಗೂ ಮತ್ತೊಂದು ಪ್ರತಿಯು ದೃಷ್ಟಿ ಮತ್ತು ಶ್ರವಣ ದೋಷ ಉಳ್ಳವರಿಗಾಗಿ ಮಾರ್ಗಸೂಚಿಗಳಲ್ಲಿ ತಿಳಿಸಲಾದ ವೈಶಿಷ್ಟ್ಯಗಳನ್ನು ಹೊಂದಿರಬೇಕು ಎಂದು ಕರಡುವಿನಲ್ಲಿ ಹೇಳಲಾಗಿದೆ.
ಮಾರ್ಗಸೂಚಿಯಲ್ಲಿನ ಇತರ ಪ್ರಮುಖ ಅಂಶಗಳು
ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡುವಾಗ, ಚಿತ್ರದ ಎರಡು ಅವತರಣಿಕೆಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು
ಒಂದಕ್ಕಿಂತ ಹೆಚ್ಚು ಭಾಷೆಗಳಿಗೆ ಡಬ್ಬಿಂಗ್ ಮಾಡಲಾದ ಚಿತ್ರಗಳು, ದೃಷ್ಟಿ ಹಾಗೂ ಶ್ರವಣದೋಷ ಉಳ್ಳವರು ಚಿತ್ರವನ್ನು ಆಸ್ವಾದಿಸಲು ಅನುಕೂಲವಾಗುವ ಕನಿಷ್ಠ ಒಂದು ವೈಶಿಷ್ಟ್ಯ ಹೊಂದಿರುವುದು ಕಡ್ಡಾಯ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳು, ಐಎಫ್‌ಎಫ್‌ಐನ ಇಂಡಿಯನ್ ಪನೋರಮಾ ವಿಭಾಗ ಮತ್ತು ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಚಿತ್ರಗಳು 'ಕ್ಲೋಸ್ಡ್ ಕ್ಯಾಪ್ಟನಿಂಗ್ ಅಂಡ್ ಆಡಿಯೊ ಡಿಸ್ಕ್ರಿಪ್ಷನ್' ಹೊಂದಿರುವುದು ಮುಂದಿನ ವರ್ಷ ಜನವರಿ 1ರಿಂದ ಕಡ್ಡಾಯ.