ಶ್ರೀನಗರ: 'ಉತ್ತರದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಸಹಜವಾಗಿಲ್ಲ' ಎಂದು ಲಡಾಖ್ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಉಲ್ಲೇಖಿಸಿ ಸೇನೆಯ ಉತ್ತರ ಕಮಾಂಡ್ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನಂಟ್ ಜನರಲ್ ಉಪೇಂದ್ರ ದ್ವಿವೇದಿ, 'ಉತ್ತರದ ಗಡಿ ಪ್ರದೇಶವು ಸ್ಥಿರವಾಗಿದೆ.
2020ರ ಮೇ ತಿಂಗಳಿನಿಂದ ಭಾರತೀಯ ಸೇನೆ ಮತ್ತು ಚೀನಾದ ಪಿಎಲ್‌ಎ ನಡುವೆ ಸಂಘರ್ಷಕ್ಕೆ ಕಾರಣವಾದ ಪೂರ್ವ ಲಡಾಖ್‌ನಲ್ಲಿನ ಏಳು ಘರ್ಷಣಾ ಕೇಂದ್ರಗಳಲ್ಲಿ ಐದು ಕೇಂದ್ರಗಳ ಸಮಸ್ಯೆ ಪರಿಹರಿಸಲಾಗಿದೆ. ಉಳಿದ ಕೇಂದ್ರಗಳ ಸಂಘರ್ಷ ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಪಾಕಿಸ್ತಾನ ಕುರಿತು ಉಲ್ಲೇಖಿಸಿದ ಅವರು, 'ನೆರೆಯ ದೇಶವು ಪೂಂಛ್ -ರಜೌರಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಭಯೋತ್ಪಾದಕ ದಾಳಿಗಳನ್ನು ಪ್ರಾಯೋಜಿಸುತ್ತಿದೆ' ಎಂದು ಹೇಳಿದರು.
'ಪೂಂಛ್- ರಜೌರಿ ಪ್ರದೇಶದಲ್ಲಿ ಜನಜೀವನದಲ್ಲಿ ಸಮೃದ್ಧಿ ಮತ್ತು ಸುಧಾರಣೆ ಕಂಡುಬಂದಿದೆ. ಹೂಡಿಕೆಗಳು ಆಗುತ್ತಿವೆ. ಜನರಿಗೆ ಉದ್ಯೋಗಗಳು ಸಿಗುತ್ತಿವೆ. ನಮ್ಮ ನೆರೆಯ ದೇಶಕ್ಕೆ ಶಾಂತಿ ಮತ್ತು ಸಮೃದ್ಧಿಯ ವಾತಾವರಣ ಇಷ್ಟವಾಗುತ್ತಿಲ್ಲ. ಅದಕ್ಕಾಗಿಯೇ ಅವರು ಆ ಪ್ರದೇಶದಲ್ಲಿ ಭಯೋತ್ಪಾದನೆ ಉತ್ತೇಜಿಸುತ್ತಿದ್ದಾರೆ. ಆದರೆ, ನಾವು ಪ್ರತಿ ಕಾರ್ಯಾಚರಣೆ ಪ್ರಾರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರಚಟುವಟಿಕೆಗಳನ್ನು ನಮ್ಮ ಸೈನಿಕರು ನಿಯಂತ್ರಿಸುತ್ತಾರೆ' ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
'ನಾವು ಕೆಲವು ಪುನರ್‌ನಿರ್ಮಾಣ ನಡೆಸುತ್ತಿರುವಾಗ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಇದು ಪರಿಸ್ಥಿತಿ ನಿಯಂತ್ರಿಸಲು ನಮಗೆ ನೆರವಾಗುತ್ತದೆ. ಈ ಪ್ರದೇಶದಲ್ಲಿ ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಜನರ ನಡುವಿನ ಸಮನ್ವಯವನ್ನು ಸುಧಾರಿಸಬೇಕಾಗಿದೆ' ಎಂದೂ ಅವರು ಹೇಳಿದರು.
'ಭಯೋತ್ಪಾದಕರು ಗಡಿ ನಿಯಂತ್ರಣ ರೇಖೆ ದಾಟಲು ಸಾಧ್ಯವಾಗದ ಕಾರಣ 2023 ಅನ್ನು 'ಶೂನ್ಯ-ಒಳನುಸುಳುವಿಕೆ ವರ್ಷ'ವೆಂದು ಘೋಷಿಸಲಾಗಿದೆ. ಆದರೆ, ಅನೇಕ ಭಯೋತ್ಪಾದಕರು ಗಟಿ ದಾಟಿ ಬರುತ್ತಿದ್ದಾರೆ. ನಾವು ಅವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಕಳೆದ ವರ್ಷ ಕೊಲ್ಲಲಾದ ಭಯೋತ್ಪಾದಕರಲ್ಲಿ 21 ಮಂದಿ ಸ್ಥಳೀಯರು. ಉಳಿದ 55 ಮಂದಿ ವಿದೇಶಿಗರು. 2022ರಲ್ಲಿ 121 ಭಯೋತ್ಪಾದಕರನ್ನು ಉಗ್ರ ಸಂಘಟನೆಗಳು ನೇಮಕಾತಿ ಮಾಡಿಕೊಂಡಿದ್ದವು. ಆದರೆ, 2023ರಲ್ಲಿ 19 ಭಯೋತ್ಪಾದಕರನ್ನು ನೇಮಿಸಿಕೊಂಡಿರುವ ವರದಿ ಸಿಕ್ಕಿದೆ' ಎಂದು ದ್ವಿವೇದಿ ಸುದ್ದಿಗಾರರಿಗೆ ಹೇಳಿದರು.