HEALTH TIPS

ಹೆಚ್ಚುತ್ತಿರುವ ಹಣದುಬ್ಬರ, ಉದ್ಯೋಗ ಭದ್ರತೆಗಳು ಕೇಂದ್ರ ಬಜೆಟ್ ಗೆ ಮುನ್ನ ಭಾರತೀಯರ ಪ್ರಮುಖ ಕಳವಳಗಳು : ಕ್ಯಾಂಟಾರ್ ಸಮೀಕ್ಷೆ

                ವದೆಹಲಿ :ಮುಂಬರುವ ಕೇಂದ್ರ ಬಜೆಟ್ ಕುರಿತು ಕ್ಯಾಂಟಾರ್ ನಡೆಸಿರುವ ಸಮೀಕ್ಷೆಯಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಉದ್ಯೋಗ ನಷ್ಟ ಭಾರತೀಯರ ಪ್ರಮುಖ ಕಳವಳಗಳಾಗಿ ಹೊರಹೊಮ್ಮಿವೆ. ಚುನಾವಣೆಗೆ ಮುನ್ನ ಮಂಡನೆಯಾಗುತ್ತಿರುವ ಮಧ್ಯಂತರ ಬಜೆಟ್ನಿಂದ ಹೆಚ್ಚಿನ ನಿರೀಕ್ಷೆಗಳಿಲ್ಲವಾದರೂ ಸರಕಾರವು ಆದಾಯ ತೆರಿಗೆ ಮಿತಿಗಳಿಗೆ ಸಂಬಂಧಿಸಿದಂತೆ ನೀತಿ ಬದಲಾವಣೆಗಳನ್ನು ಪ್ರಕಟಿಸಬಹುದು ಎಂದು ಜನರು ಆಶಿಸಿದ್ದಾರೆ.

              ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.57ರಷ್ಟು ಭಾರತೀಯರು ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರತೀ ಮೂವರಲ್ಲೊಬ್ಬರು ಉದ್ಯೋಗ ಭದ್ರತೆ ಮತ್ತು ಕೆಲಸದಿಂದ ವಜಾಗೊಳಿಸುವಿಕೆ ಬಗ್ಗೆಯೂ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಕ್ಯಾಂಟಾರ್ ವರದಿಯು ತಿಳಿಸಿದೆ.

                ಆದಾಯ ತೆರಿಗೆಗೆ ಸಂಬಂಧಿಸಿದಂತೆ ನೀತಿ ಬದಲಾವಣೆ ಪ್ರಕಟಣೆಗಳಿಗಾಗಿ ಜನರು ನಿರೀಕ್ಷಿಸುತ್ತಿದ್ದಾರೆ. ಪ್ರಸ್ತುತ ಮೂರು ಲಕ್ಷ ರೂ.ಇರುವ ಮೂಲ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಬೇಕು ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಅಥವಾ ಪ್ರಮಾಣಿತ ಕಡಿತವನ್ನು 50,000 ರೂ.ಗಳಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಬೇಕು ಎನ್ನುವುದು ಸಾಮಾನ್ಯ ನಿರೀಕ್ಷೆಯಾಗಿದೆ ಎಂದು ವರದಿಯು ಹೇಳಿದೆ. ಗರಿಷ್ಠ ತೆರಿಗೆ ಸ್ಲ್ಯಾಬ್ ಮಿತಿಯನ್ನು ಈಗಿನ 15 ಲಕ್ಷ ರೂ.ನಿಂದ ಹೆಚ್ಚಿಸುವ ಅಥವಾ ಶೇ.30ರ ಗರಿಷ್ಠ ತೆರಿಗೆ ದರವನ್ನು ತಗ್ಗಿಸುವ ಬಗ್ಗೆ ವ್ಯಾಪಾರಿಗಳು ಮತ್ತು ಸ್ವಯಂ - ಉದ್ಯೋಗಿಗಳು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

              ಸೆಕ್ಷನ್ 80ರಡಿ ವೈದ್ಯಕೀಯ ವಿಮೆ ಪ್ರೀಮಿಯಮ್ಗಾಗಿ ಕಡಿತಗಳ ಮಿತಿಯನ್ನು ಸರಕಾರವು ಹೆಚ್ಚಿಸಲಿದೆ ಎಂದೂ ನಿರೀಕ್ಷಿಸಲಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪೈಕಿ ಶೇ.70ರಷ್ಟು ಜನರು ಸೆಕ್ಷನ್ 80ಸಿ (ಪಿಪಿಎಫ್,ತೆರಿಗೆ ಉಳಿತಾಯ ಮ್ಯೂಚ್ಯುವಲ್ ಫಂಡ್ ಗಳು/ಇಎಲ್‌ಎಸ್‌ಎಸ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ) ಅಡಿ ಹೂಡಿಕೆಗಳ ಮೇಲೆ ಹೆಚ್ಚಿನ ತೆರಿಗೆ ರಿಯಾಯಿತಿಯನ್ನು ಬಯಸಿದ್ದಾರೆ.

ಶೇ.57ರಷ್ಟು ಜನರು 2024ರಲ್ಲಿ ಭಾರತವು ಇತರ ಆರ್ಥಿಕತೆಗಳಿಗಿಂತ ವೇಗದ ಬೆಳವಣಿಗೆಯನ್ನು ಮುಂದುವರಿಸಲಿದೆ ಎಂದು ನಂಬಿದ್ದಾರೆ. ಭಾರತೀಯ ಆರ್ಥಿಕತೆಯು ಐದು ಲಕ್ಷ ಕೋಟಿ ರೂ.ಗಳ ಗಡಿಯನ್ನು ತಲುಪಲು ಕನಿಷ್ಠ 3-4 ವರ್ಷಗಳು ಬೇಕು ಎಂದು ಶೇ.50ರಷ್ಟು ಜನರು ಭಾವಿಸಿದ್ದಾರೆ.

'2024 ಚುನಾವಣಾ ವರ್ಷವಾಗಿರುವುದರಿಂದ ಸರಕಾರವು ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ. ದೇಶದ ಸ್ಥೂಲ ಆರ್ಥಿಕತೆಯ ಕಾರ್ಯಕ್ಷಮತೆಯ ಬಗ್ಗೆ ಜನರಲ್ಲಿಯ ಧನಾತ್ಮಕತೆ ಮತ್ತು ಭಾರತವು ಪ್ರಗತಿಯನ್ನು ಸಾಧಿಸಲಿದೆ ಎಂಬ ನಂಬಿಕೆಯು ಮುಂದುವರಿಯಲಿದೆ. ಆದಾಗ್ಯೂ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಹೆಚ್ಚುತ್ತಿರುವ ಹಣದುಬ್ಬರದ ಬಗ್ಗೆ ಅವರು ಚಿಂತಿತರಾಗಿದ್ದಾರೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಉದ್ಯೋಗ ಸ್ಥಿರತೆಯ ಬಗ್ಗೆ ಹೆಚ್ಚಿನ ಆತಂಕವಿದೆ. ಸರಕಾರವು ಹಣದುಬ್ಬರದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಆದಾಯ ತೆರಿಗೆಯಲ್ಲಿ ಪರಿಹಾರದೊಂದಿಗೆ ಮಧ್ಯಮ ವರ್ಗ ಸ್ನೇಹಿ ಬಜೆಟನ್ನು ಮಂಡಿಸುತ್ತದೆ ಎಂದು ಹೆಚ್ಚಿನವರು ನಿರೀಕ್ಷಿಸಿದ್ದಾರೆ ಎಂದು ಕ್ಯಾಂಟಾರ್ನ ಇನ್ಸೈಟ್ಸ್ ಡಿವಿಜನ್ ಕಾರ್ಯಕಾರಿ ಆಡಳಿತ ನಿರ್ದೇಶಕ (ದಕ್ಷಿಣ ಏಶ್ಯಾ) ದೀಪೇಂದರ್ ರಾಣಾ ಹೇಳಿದರು.

                2024ರ ನಂತರ ನೂತನ ವಾಹನಗಳನ್ನು ಖರೀದಿಸಲು ಬಯಸಿರುವವರಲ್ಲಿ ಶೇ.61ರಷ್ಟು ಜನರು ಇಲೆಕ್ಟ್ರಿಕ್ ವಾಹನಗಳ ಬಗ್ಗೆ ಒಲವು ಹೊಂದಿದ್ದಾರೆ ಮತ್ತು ಅವುಗಳ ಖರೀದಿಗಾಗಿ ಸರಕಾರವು ಪ್ರೋತ್ಸಾಹಕ ಕ್ರಮಗಳನ್ನು ತರಬೇಕು ಎಂದು ಬಯಸಿದ್ದಾರೆ. ಶೇ.40ರಷ್ಟು ಜನರು ತಕ್ಷಣದ ರಿಯಾಯಿತಿಗಳು, ರಸ್ತೆ ತೆರಿಗೆಯಲ್ಲಿ ಮತ್ತು ವಾಹನ ನೋಂದಣಿ ಶುಲ್ಕದಲ್ಲಿ ಕಡಿತಗಳ ಮೂಲಕ ವಾಹನ ಖರೀದಿಯ ಸಂದರ್ಭದಲ್ಲೇ ವಿತ್ತೀಯ ಲಾಭಗಳನ್ನು ಬಯಸಿದ್ದಾರೆ ಎಂದೂ ಸಮೀಕ್ಷೆ ವರದಿಯು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries