ನವದೆಹಲಿ: ಭಾರತೀಯ ಸೇನೆಯ ಆರು ಮಂದಿ ವೀರರನ್ನು ಕೀರ್ತಿ ಚಕ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪೈಕಿ ಮೂವರಿಗೆ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿದೆ.
ಶಾಂತಿಕಾಲದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದು. 21 ಪ್ಯಾರಾಚೂಟ್ ರೆಜಿಮೆಂಟ್‌ನ ಮೇಜರ್ ದಿಗ್ವಿಜಯ್ ಸಿಂಗ್, 4 ಸಿಖ್ ರೆಜಿಮೆಂಟ್‌ನ ಮೇಜರ್ ದೀಪೇಂದ್ರ ವಿಕ್ರಮ್, 21 ಮಹರ್‌ನ ಹವಾಲ್ದಾರ್ ಪವನ್ ಕುಮಾರ್ ಯಾದವ್ ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಆರ್ಮಿ ಮೆಡಿಕಲ್ ಕೋರ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್, ಪ್ಯಾರಾಚೂಟ್ ರೆಜಿಮೆಂಟ್‌ನ 9ನೆಯ ತುಕಡಿಯ ಹವಾಲ್ದಾರ್ ಅಬ್ದುಲ್ ಮಜಿದ್, 55 ಗ್ರೆನೆಡಿಯರ್ಸ್‌ನ ಸಿಪಾಯಿ ಪವನ್ ಕುಮಾರ್ ಅವರು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಬಾರಿ ಅಶೋಕಚಕ್ರ ಪ್ರಶಸ್ತಿಯನ್ನು ಘೋಷಿಸಿಲ್ಲ. 16 ಮಂದಿಗೆ ಶೌರ್ಯ ಚಕ್ರ (ಇದರಲ್ಲಿ ಇಬ್ಬರಿಗೆ ಮರಣೋತ್ತರ), 53 ಮಂದಿಗೆ ಸೇನಾ ಪದಕ (ಏಳು ಮಂದಿಗೆ ಮರಣೋತ್ತರವಾಗಿ), ಒಬ್ಬರಿಗೆ ನೌ ಸೇನಾ ಪದಕ ಹಾಗೂ ನಾಲ್ಕು ಮಂದಿಗೆ ವಾಯುಸೇನಾ ಪದಕ ಘೋಷಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಶೌರ್ಯಚಕ್ರ ಪ್ರಶಸ್ತಿಗೆ ಆಯ್ಕೆಯಾದವರು: ಮಾನೆಓ ಫ್ರಾನ್ಸಿಸ್ (21 ಪ್ಯಾರಾಚೂಟ್ ರೆಜಿಮೆಂಟ್), ಮೇಜರ್ ಅಮನದೀಪ್ ಜಾಖಡ್ (4 ಸಿಖ್ ರೆಜಿಮೆಂಟ್), ನಯೀಬ್ ಸುಬೆದಾರ್ ಬರಿಯಾ ಸಂಜಯ್ ಕುಮಾರ್ ಭಮರ್ ಸಿಂಗ್ (ಮಹಾರ್ ರೆಜಿಮೆಂಟ್‌ನ), ಹವಾಲ್ದಾರ್ ಸಂಜಯ್ ಕುಮಾರ್ (9 ಅಸ್ಸಾಂ ರೈಫಲ್ಸ್) ಮತ್ತು ಪರ್ಷೋತ್ತಮ್ ಕುಮಾರ್ (ರಾಷ್ಟ್ರೀಯ ರೈಫಲ್ಸ್), ಅಕ್ಷತ್ ಉಪಾಧ್ಯಾಯ (ಜಾಟ್ ರೆಜಿಮೆಂಟ್).
ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಬಿಮಲ್ ರಂಜನ್ ಬೆಹೆರಾ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ಶೈಲೇಶ್ ಸಿಂಗ್, ಫ್ಲೈಟ್ ಲೆಫ್ಟಿನೆಂಟ್ ಹೃಷಿಕೇಶ್ ಜಯನ್, ಸಿಆರ್‌ಪಿಎಫ್‌ನ ಸಹಾಯಕ ಕಮಾಂಡೆಂಟ್ ಬಿಭೋರ್ ಕುಮಾರ್ ಸಿಂಗ್ ಅವರಿಗೂ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪೊಲೀಸರಾದ ಮೋಹನ್ ಲಾಲ್, ಅಮಿತ್ ರೈನಾ, ಫರೋಜ್ ಅಹಮದ್ ದರ್ ಮತ್ತು ವರುಣ್ ಸಿಂಗ್ ಅವರಿಗೆ ಶೌರ್ಯಚಕ್ರ ಘೋಷಣೆ ಆಗಿದೆ.
ಪ್ರಾಂಜಲ್‌ಗೆ ಶೌರ್ಯ ಪ್ರಶಸ್ತಿ ನವೆಂಬರ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ಪ್ರಾಂಜಲ್ ಅವರು ಕರ್ನಾಟಕದವರು. ಅಸ್ಸಾಂ ರೈಫಲ್ಸ್‌ನ ರೈಫಲ್‌ಮ್ಯಾನ್ ಅಲೋಕ್ ರಾವ್ ಅವರಿಗೂ ಮರಣೋತ್ತರವಾಗಿ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ.