ಆಂಧ್ರಪ್ರದೇಶ: ಕಳೆದ ವರ್ಷ 'ಜವಾನ್' ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದ ಲೇಡಿ ಸೂಪರ್ಸ್ಟಾರ್, ನಟಿ ನಯನತಾರಾ ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಜವಾನ್, 'ಇರೈವನ್' ಸಿನಿಮಾಗಳ ಸಕ್ಸಸ್ ಬೆನ್ನಲ್ಲೇ ತಮ್ಮ ಮುಂದಿನ ಪ್ರಾಜೆಕ್ಟ್ಗಳಲ್ಲಿ ಸದ್ಯ ಬ್ಯುಸಿಯಾಗಿರುವ ನಟಿಗೆ ಇದೀಗ ಶಾಕಿಂಗ್ ಘಟನೆಯೊಂದು ಎದುರಾಗಿದ್ದು, ತಾವು ಅಭಿನಯಿಸಿದ 'ಅನ್ನಪೂರ್ಣಿ' ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರೀ ವಿವಾದಕ್ಕೆ ತುತ್ತಾಗಿದೆ.
ಚಿತ್ರದಲ್ಲಿ ಕೆಲವು ಪ್ರಚೋದನಕಾರಿ ವಿಷಯಗಳಿದ್ದು, ಲವ್ ಜಿಹಾದ್ ಹಾಗೂ ಹಿಂದೂ ಭಾವನೆಗಳನ್ನು ಘಾಸಿಗೊಳಿಸುವ ಸೀನ್ಗಳಿದೆ ಎಂದು ಹಲವರು ಆರೋಪಿಸಿದ್ದಾರೆ.
ಈ ವಿವಾದಗಳ ಬೆನ್ನಲ್ಲೇ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿದ್ದು, ಮುಂಬೈ ಪೊಲೀಸರು ನಿರ್ಮಾಪಕರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿಕೊಂಡಿದ್ದಾರೆ. ಈ ಪ್ರತಿಭಟನೆಯಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗುತ್ತಿದ್ದು, 'ಅನ್ನಪೂರ್ಣಿ' ಚಿತ್ರದ ವಿರುದ್ಧ ಹಲವು ದೂರುಗಳ ಕೇಳಿಬಂದ ಹಿನ್ನೆಲೆ ನೆಟ್‌ಫ್ಲಿಕ್ಸ್ ಇಂಡಿಯಾ ಕೂಡ ಈ ಚಿತ್ರವನ್ನು ತನ್ನ ಒಟಿಟಿ ಪ್ಲಾಟ್‌ಫಾರ್ಮ್‌ನಿಂದ ತೆಗೆದುಹಾಕಿದೆ.
ಈ ಕುರಿತಂತೆ ಇದೀಗ ಪ್ರತಿಕ್ರಿಯಿಸಿರುವ ಚಿತ್ರದ ಸಹ-ನಿರ್ಮಾಣ ಸಂಸ್ಥೆ ಝೀ ಎಂಟರ್‌ಟೈನ್‌ಮೆಂಟ್, ತಮ್ಮ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಿಂದ ತಾತ್ಕಾಲಿಕವಾಗಿ ತೆಗೆದುಹಾಕಿದ್ದು, ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾದ ಸೀನ್ಗಳನ್ನು ರೀ-ಎಡಿಟ್ ಮಾಡುವ ಮೂಲಕ ಮತ್ತೆ ಬಿಡುಗಡೆಗೊಳಿಸಲು ಮುಂದಾಗಿದೆ.
ಬಿಡುಗಡೆಗೊಳಿಸಿದ ಅಧಿಕೃತ ಹೇಳಿಕೆಯಲ್ಲಿ, 'ಆತ್ಮೀಯ ಸರ್, ನೀವು ತಿಳಿಸಲಾದ ಪತ್ರವನ್ನು ನಾವು ಸ್ವೀಕರಿಸಿದ್ದೇವೆ ಮತ್ತು ಅದರ ವಿಷಯಗಳನ್ನು ಗಮನಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ, ನಾವು ನಮ್ಮ ಸಹ-ನಿರ್ಮಾಪಕರಾದ ಟ್ರೈಡೆಂಟ್ ಆರ್ಟ್ಸ್‌ನೊಂದಿಗೆ ಸಮನ್ವಯ ಸಾಧಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದಂತೆ ನಿಮ್ಮ ಕಾಳಜಿಯನ್ನು ಪರಿಹರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಎಡಿಟ್ ಆಗುವವರೆಗೂ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾವನ್ನು ಪ್ರಸಾರ ಮಾಡುವುದಿಲ್ಲ' ಎಂದು ತಿಳಿಸಿದೆ.
'ಚಿತ್ರದ ನಿರ್ಮಾಪಕರಾಗಿ ನಾವು ಹಿಂದೂಗಳು ಮತ್ತು ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಆಯಾ ಭಾವನೆಗಳಿಗೆ ಉಂಟಾದ ಅನಾನುಕೂಲತೆ ಮತ್ತು ಬೇಸರಕ್ಕೆ ಈ ಮೂಲಕ ಕ್ಷಮೆಯಾಚಿಸಲು ಬಯಸುತ್ತೇವೆ' ಎಂದು ತಿಳಿಸಿದ್ದಾರೆ.