ನವದೆಹಲಿ:ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮುಂದಿನ ತಿಂಗಳು ಮೂರನೇ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಇಳಿಸುವ ಸಾಧ್ಯತೆಯನ್ನು ಪರಿಶೀಲಿಸಲಿವೆ. ಮೂರನೇ ತ್ರೈಮಾಸಿಕದಲ್ಲಿ ತೈಲ ಕಂಪನಿಗಳ ಲಾಭ ದಾಖಲೆ ಮಟ್ಟದ 75 ಸಾವಿರ ಕೋಟಿ ರೂಪಾಯಿಗಿಂತ ಅಧಿಕವಾಗುವ ನಿರೀಕ್ಷೆ ಇದ್ದು, ಕಚ್ಚಾ ತೈಲ ಖರೀದಿ ವೆಚ್ಚ ಮತ್ತಷ್ಟು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಲಿವೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರಿ ಸ್ವಾಮ್ಯದ ತೈಲ ಚಿಲ್ಲರೆ ಮಾರಾಟ ಕಂಪನಿಗಳು 2022ರ ಏಪ್ರಿಲ್ ನಿಂದ ಬೆಲೆಯನ್ನು ಒಂದೇ ಮಟ್ಟದಲ್ಲಿ ಉಳಿಸಿವೆ. ಇದೀಗ ಬೆಲೆಯ ಪರಾಮರ್ಶೆ ಅನಿವಾರ್ಯವಾಗಿದ್ದು, ಕಂಪನಿಗಳು ಪ್ರತಿ ಲೀಟರ್ ಗೆ 10 ರೂಪಾಯಿ ಲಾಭ ಗಳಿಸುತ್ತಿದ್ದು, ಇದನ್ನು ಗ್ರಾಹಕರಿಗೆ ವರ್ಗಾಯಿಸಬಹುದಾಗಿದೆ. ಈ ನಡೆಯು ಹಣದುಬ್ಬರ ಇಳಿಕೆಗೆ ಕಾರಣವಾಗಲಿದ್ದು, 2024ರ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಮೂಲಗಳು ವಿವರಿಸಿವೆ.
"ಇಂಧನ ಮಾರಾಟದ ಮೇಲೆ ಅಧಿಕ ಲಾಭ ಇರುವ ಹಿನ್ನೆಲೆಯಲ್ಲಿ ಮೂರು ತೈಲ ಮಾರುಕಟ್ಟೆ ಕಂಪನಿಗಳು ದೊಡ್ಡ ಪ್ರಮಾಣದ ಲಾಭವನ್ನು 2023-24ರ 1 ಹಾಗೂ 2ನೇ ತ್ರೈಮಾಸಿಕದಲ್ಲಿ ದಾಖಲಿಸಿವೆ. 3ನೇ ತ್ರೈಮಾಸಿಕದಲ್ಲೂ ಇದೇ ಪ್ರವೃತ್ತಿ ಮುಂದುವರಿಯಲಿದೆ. ಈ ತಿಂಗಳ ಕೊನೆಗೆ ಫಲಿತಾಂಶವನ್ನು ಪ್ರಕಟಿಸಿದ ಬಳಿಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 5 ರಿಂದ 10 ರೂಪಾಯಿಯಷ್ಟು ಉಳಿಸುವ ಸಾಧ್ಯತೆಯನ್ನು ಪರಿಶೀಲಿಸಲಿವೆ. ಭವಿಷ್ಯದಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಂಭಾವ್ಯ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, ಇತರ ಹಕ್ಕುದಾರರ ಜತೆ ಚರ್ಚಿಸಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸರ್ಕಾರ ಈ ಮೂರೂ ಕಂಪನಿಗಳ ಪ್ರವರ್ತಕರಾಗಿದ್ದು, ದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿದೆ. 2023-24ರ ಮೊದಲ ಅರ್ಧವಾರ್ಷಿಕ ಅವಧಿಯಲ್ಲಿ ಮೂರೂ ಸಂಸ್ಥೆಗಳ ಒಟ್ಟು ಲಾಭ 57,091.87 ಕೋಟಿ ರೂಪಾಯಿ ಆಗಿದ್ದು, 2022-23ರಲ್ಲಿ ದಾಖಲಾದ 1137.89 ಕೋಟಿ ರೂಪಾಯಿಗೆ ಹೋಲಿಸಿದರೆ ಇದು ಪ್ರತಿಶತ 4917ರಷ್ಟು ಅಧಿಕ.