ಹಾಲು ಸಮತೋಲಿತ ಆಹಾರ ಎಂದು ನಮಗೆ ತಿಳಿದಿದೆ. ಬೇರೆ ಯಾವುದೇ ಆಹಾರ ಸೇವಿಸದಿದ್ದರೂ ಒಂದು ಲೋಟ ಹಾಲು ಕುಡಿದರೆ ದೇಹಕ್ಕೆ ಬೇಕಾದ ಅಂಶಗಳು ಲಭಿಸುತ್ತದೆ.
ನಮ್ಮ ನಡುವೆ ಬೆಳಿಗ್ಗೆ ಮತ್ತು ರಾತ್ರಿ ಹಾಲು ಕುಡಿಯುವ ಅಭ್ಯಾಸವಿರುವವರು ಇರುತ್ತಾರೆ. ಹಾಲಿನಲ್ಲಿ ಹಲವು ಪೋಷಕಾಂಶಗಳಿದ್ದರೂ ಹೆಚ್ಚು ಸೇವನೆ ದೇಹಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಅತಿಯಾದರೆ ಅಮೃತವೂ ವಿಷ ಎಂದು ಕೇಳಿಲ್ಲವೇ? ಹಾಲಿನ ವಿಷಯವೂ ಅದೇ. ಅಧಿಕ ತೂಕ ಹೊಂದಿರುವವರು ನಿಯಮಿತವಾಗಿ ಹಾಲನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಕಡಿಮೆ ತೂಕದ ವ್ಯಕ್ತಿಗಳಿಗೆ, ಪ್ರತಿದಿನ ಹಾಲು ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ. ಪ್ರತಿದಿನ ಹಾಲು ಕುಡಿಯುವುದರಿಂದ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಇದಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಪಾಶ್ರ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಆದರೆ ಹೆಚ್ಚು ಹಾಲು ಕುಡಿಯುವುದರಿಂದ ಮಹಿಳೆಯರಲ್ಲಿ ಮೂಳೆ ಮುರಿತ ಮತ್ತು ಹದಿಹರೆಯದವರಲ್ಲಿ ಮೊಡವೆಗಳು ಉಂಟಾಗಬಹುದು ಎಂದು ಅಧ್ಯಯನಗಳು ಹೇಳುತ್ತಿವೆ. ಹೆಚ್ಚಿನ ಪ್ರಮಾಣದ ಹಾಲನ್ನು ಕುಡಿಯುವುದರಿಂದ ಅದರ ಹೆಚ್ಚಿನ ಕ್ಯಾಲ್ಸಿಯಂ ಅಂಶದಿಂದಾಗಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಲು ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.