ಬದಿಯಡ್ಕ: ಜೀವನದಲ್ಲಿ ಹಣಸಂಪಾದನೆಯೊಂದೇ ಸಾಧನೆಯಲ್ಲ. ಯಾವುದೇ ಕ್ಷೇತ್ರದಲ್ಲಿ ದುಡಿಯುತ್ತಿದ್ದರೂ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಉನ್ನತ ಸ್ಥಾನಕ್ಕೇರುವುದೇ ಸಾಧನೆ. ಜವಾಬ್ದಾರಿಗಳನ್ನು ಇತರರಿಗೆ ಹಸ್ತಾಂತರಿಸಿ ಅವರನ್ನು ಬೆಳೆಸುವುದರ ಮೂಲಕ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತಾರಗೊಳಿಸಬೇಕು.ಧ್ಯೇಯೋದ್ದೇಶಗಳ ಬಗ್ಗೆ ಸ್ಪಷ್ಟ ನಿಲುವು ಇರಬೇಕು. ಅದಕ್ಕಾಗಿ ಪೂರ್ವಸಿದ್ಧತೆಗಳು ಸರಿಯಾಗಿ ಮಾಡಬೇಕು ಎಂದು ದಕ್ಷಿಣ ಭಾರತದ ನಂ 1 ಸಂಸ್ಥೆ ಬಿಂದು ಮಿನರಲ್ ವಾಟರ್ ಸಂಸ್ಥೆಯ ಮುಖ್ಯಸ್ಥರಾದ ಸತ್ಯಶಂಕರ ಪುತ್ತೂರು ಹೇಳಿದರು.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶುಕ್ರವಾರ ಜರಗಿದ ರಾಮಾಯಣ ಕಥಾಧಾರಿತ ವಸಂತೋತ್ಸವ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಮುಂದಿನ ತಲೆಮಾರಿನ ಉತ್ತಮ ವ್ಯಕ್ತಿತ್ವ ನಿರ್ಮಾಣದ ಸದುದ್ದೇಶದಿಂದ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದನ್ನು ಇನ್ನಷ್ಟು ವಿಸ್ತಾರಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಯುವಜನರ ಸಂಕಲ್ಪ, ಸಕಾರಾತ್ಮಕ ಚಿಂತನೆ, ಕಲ್ಪನೆಗಳು ಯಶಸ್ಸಿನ ರಹದಾರಿಯಾಗಿ ಉದ್ಯೋಗಪತಿಗಳಾಗಬೇಕು ಎಂದರು.
ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಕಂಡೆತ್ತೋಡಿ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಮಾತೃಸಂಘದ ಅಧ್ಯಕ್ಷೆ ಶಿಲ್ಪಾ ಕಾಮತ್ ಬದಿಯಡ್ಕ ಶುಭಹಾರೈಸಿದರು. ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆ ಸರೋಜಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಪೂಜಾಶ್ರೀ ಸ್ವಾಗತಿಸಿ, ಬ್ರಿಜೇಶ್ ಮೋಹನ್ ವಂದಿಸಿದರು. ವೈಶಾಲಿ ಕಾರ್ಯಕ್ರಮ ನಿರೂಪಿಸಿದಳು. ಸುಪ್ರೀತಾ ರೈ ವಳಮಲೆ ಹಾಗೂ ಸುಪ್ರೀತಾ ದಂಬೆಮೂಲೆ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಸ್ವರ್ಣಾಂಕುರ ಬಹುಮಾನ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ತರಗತಿಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು.
ರಾಮಮಂದಿರ ಹಿನ್ನೆಲೆಯ ಆಕರ್ಷಕ ವೇದಿಕೆ :
ಅಯೋಧ್ಯೆಯ ಶ್ರೀರಾಮ ಮಂದಿರದ ಹಿನ್ನೆಲೆಯ ಆಕರ್ಷಕ ವೇದಿಕೆಯಲ್ಲಿ ರಾಮಾಯಣ ಕಥೆಯನ್ನಾಧÀರಿಸಿದ ನೃತ್ಯ, ನಾಟಕ ಮೊದಲಾದ ಕಲಾಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ತೋರ್ಪಡಿಸಿದರು. ಯಾವುದೇ ಧ್ವನಿಸುರುಳಿಯನ್ನುಪಯೋಗಿಸದೆ ಹಿನ್ನೆಲೆ ಗಾಯನದಲ್ಲಿಯೂ ವಿದ್ಯಾರ್ಥಿಗಳು ತಮ್ಮ ಸ್ವರಮಾಧುರ್ಯವನ್ನು ಪ್ರಸ್ತುತಪಡಿಸಿದರು. ಹನುಮಾನ್ ಚಾಲಿಸ, ಸೀತಾಪಹರಣ, ಯುದ್ಧಕಾಂಡ, ರಾವಣ ಸಂಹಾರ, ಅದೋ ನೋಡು ಕಟ್ಟುತಿಹರು ದಿವ್ಯ ರಾಮ ಮಂದಿರ ಮೊದಲಾದ ವಿಷಯವನ್ನಾಧರಿಸಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಗಮನಸೆಳೆದರು.