ನವದೆಹಲಿ/ಮುಂಬೈ : ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷವೇ 'ನಿಜವಾದ ಶಿವಸೇನಾ' ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಬಣವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಶಿಂದೆ ಸೇರಿದಂತೆ ಅವರ ಬಣದ 16 ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಮನವಿಯನ್ನು ಕೂಡ ಸ್ಪೀಕರ್ ನಾರ್ವೇಕರ್ ಅವರು ತಳ್ಳಿಹಾಕಿದ್ದರು. ಅಷ್ಟೇ ಅಲ್ಲ, ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಶಿಂದೆ ಬಣ ಇರಿಸಿದ್ದ ಕೋರಿಕೆಯನ್ನು ಕೂಡ ಅವರು ಪುರಸ್ಕರಿಸಿರಲಿಲ್ಲ.
ಯಾವುದೇ ಪಕ್ಷದ ನಾಯಕತ್ವವು ಆಂತರಿಕ ಭಿನ್ನಾಭಿಪ್ರಾಯ ಹಾಗೂ ಅಶಿಸ್ತನ್ನು ಹತ್ತಿಕ್ಕಲು ಸಂವಿಧಾನದ 10ನೆಯ ಪರಿಚ್ಛೇದದಲ್ಲಿ ಇರುವ ನಿಯಮವನ್ನು (ಪಕ್ಷಾಂತರ ನಿಷೇಧ ಕಾನೂನು) ಬಳಸಿಕೊಳ್ಳುವಂತೆ ಇಲ್ಲ ಎಂದು ಕೂಡ ಸ್ಪೀಕರ್ ಹೇಳಿದ್ದರು. ಚುನಾವಣಾ ಆಯೋಗವು ಕೂಡ ಶಿಂದೆ ನೇತೃತ್ವದ ಬಣಕ್ಕೆ ಶಿವಸೇನಾ ಪಕ್ಷದ ಚಿಹ್ನೆಯನ್ನು ನೀಡಿದೆ.
ಶಿಂದೆ ಬಣದಿಂದ ಹೈಕೋರ್ಟ್‌ಗೆ ಅರ್ಜಿ: ಠಾಕ್ರೆ ಬಣದ 14 ಶಾಸಕರನ್ನು ಅನರ್ಹಗೊಳಿಸದೆ ಇರುವ ಸ್ಪೀಕರ್ ನಿಲುವನ್ನು ಪ್ರಶ್ನಿಸಿ ಶಿಂದೆ ಬಣವು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಶುಕ್ರವಾರವೇ ಸಲ್ಲಿಸಲಾಗಿದೆ. ಸ್ಪೀಕರ್ ನೀಡಿರುವ ಆದೇಶವನ್ನು ರದ್ದುಪಡಿಸಬೇಕು, 14 ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಈ ಅರ್ಜಿಯನ್ನು ಜನವರಿ 22ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಮಾಹಿತಿಯು ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಇದೆ. 2022ರ ಜುಲೈ 4ರಂದು ನಡೆಯಲಿರುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ, ಶಿಂದೆ ನೇತೃತ್ವದ ಸರ್ಕಾರದ ಪರವಾಗಿ ಮತ ಚಲಾಯಿಸುವಂತೆ ಶಿವಸೇನಾ ಸದಸ್ಯರೆಲ್ಲರಿಗೂ ವಿಪ್ ನೀಡಲಾಗಿತ್ತು ಎಂದು ಪಕ್ಷದ ಮುಖ್ಯ ಸಚೇತಕ ಭರತ್ ಗೋಗಾವಲೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.
ಆದರೆ, ಆದರೆ ಠಾಕ್ರೆ ಬಣದ 14 ಶಾಸಕರು ವಿಪ್ ಉಲ್ಲಂಘಿಸಿದರು, ತಮ್ಮ ನಡೆಯ ಮೂಲಕ ಶಿವಸೇನಾ ಪಕ್ಷದ ಸದಸ್ಯತ್ವವನ್ನು ಸ್ವಇಚ್ಛೆಯಿಂದ ತೊರೆದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟಿದ್ದು ಮಾತ್ರವೇ ಅಲ್ಲದೆ, 14 ಶಾಸಕರು ಶಿವಸೇನಾ ವಿರುದ್ಧ ಮತ ಚಲಾಯಿಸಿದ್ದರು ಎಂಬ ಸಂಗತಿಯನ್ನು ಪರಿಗಣಿಸಲು ಸ್ಪೀಕರ್ ವಿಫಲರಾಗಿದ್ದಾರೆ ಎಂದು ಗೋಗಾವಲೆ ಅವರು ಅರ್ಜಿಯಲ್ಲಿ ಹೇಳಿದ್ದಾರೆ.