ಉಪ್ಪಳ: ಕಾಸರಗೋಡು ಜಿಲ್ಲೆ ಕೊರಗ ಸಮಾಜ ಸಂಗಮ ಸಮಿತಿ ಆಶ್ರಯದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೊರಗ ಸಮಾಜ ಸಂಗ-2023 ಕಾರ್ಯಕ್ರಮ ಭಾನುವಾರ ಕೊಂಡೆವೂರು ಮಠದಲ್ಲಿ ಭಾರೀ ಅದ್ದೂರಿಯಾಗಿ ನಡೆಯಿತು.
ಆರಂಭದಲ್ಲಿ ಉಪ್ಪಳ ಪೇಟೆಯಿಂದ ನೂರಾರು ಮಂದಿ ಸಮಾಜದವರನ್ನು ಶೋಭಾಯಾತ್ರೆಯ ಮೂಲಕ ಕೊಂಡೆವೂರು ಮಠಕ್ಕೆ ಬರಮಾಡಿಕೊಂಡರು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಮುಂಬಯಿ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶೋಭಾ ಯಾತ್ರೆಗೆ ಚಾಲನೆ ನೀಡಿದರು. ಸ್ವಾಮೀಜಿ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆ ನಡೆಯಿತು. ಈ ವೇಳೆ ಸಮಾಜದ ಮಕ್ಕಳ ಕುಣಿತ ಭಜನೆ, ಕೊರಗ ನೃತ್ಯ, ಮುತ್ತುಕೊಡೆ, ಡೋಲು ಸಹಿತ ಹಲವು ಸಾಂಸ್ಕೃತಿಕ ಕೃತಿಗಳು ಶೋಭಾಯಾತ್ರೆಗೆ ಮೆರಗನ್ನು ನೀಡಿತು. ಬಳಿಕ ಮಠದಲ್ಲಿ ನಡೆದ ಕೊರಗ ಸಮಾಜ ಸಂಗಮ 2023 ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದರು.
ಕ್ಯಾಂಪೆÇ್ಕೀ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಅನಂತಪದ್ಮನಾಭ ಅಸ್ರಣ್ಣರು ಮತ್ತು ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಶಶಿಧರ ಶೆಟ್ಟಿ ಗ್ರಾಮ ಚಾವಡಿ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಸಮಾಜಸೇವಕ ಅಶೋಕ್ ಕುಮಾರ್ ಹೊಳ್ಳ, ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು ಹಾಗೂ ಸಮಾಜದ ಹಿರಿಯ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊರಗ ಸಮಾಜದಿಂದ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಸಾಧನೆ ಮಾಡಿದ ಸರಿತಾ ಬಾಯಾರು (ಎಂಎಸ್ ಡಬ್ಲ್ಯು), ಮೀನಾಕ್ಷಿ (ಎಂ.ಎ), ಶೋಭಿತ ಪುಳಿಕೂರು (ಬಿಎಡ್), ಹಿಂದಿ ರಾಮಾಯಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಹಾಲಕ್ಷ್ಮಿ ಗೌರೀಮೂಲೆ, ಕ್ರೀಡಾಪಟುಗಳಾದ ದಿನೇಶ್ ಪುಳಿಕೂರು, ರಘುನಾಥ ಕುಳೂರು ಇವರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು. ಕುಮಾರಿ ಗಾಯತ್ರಿ ಕೊಂಡೆವೂರು ಪ್ರಾರ್ಥನೆ ಹಾಡಿದರು. ರಘುರಾಜ್ ಕುಳೂರು ಸ್ವಾಗತಿಸಿ,ಮೀನಾಕ್ಷಿ ವಂದಿಸಿದರು. ದಿನಕರ ಹೊಸಂಗಡಿ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್, ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ.ಕೆ ಶ್ರೀಕಾಂತ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಕಾಸರಗೋಡು ಟಿಇಒ ವೀರೇಂದ್ರ ಕುಮಾರ್, ಸಂಜೀವ ಪುಳಿಕೂರು ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕತಿಕ ಕಾರ್ಯಕ್ರಮದಂಗವಾಗಿ ಸಮಾಜದ ಸದಸ್ಯರಿಂದ ವಿವಿಧ ಸಾಂಪ್ರದಾಯಕ ನೃತ್ಯ ನಡೆಯಿತು. ಹರೀಶ್ ಶೆಟ್ಟಿ ಮಾಡ ಸ್ವಾಗತಿಸಿ, ಉಮಾನಾಥ್ ವಂದಿಸಿದರು.
ಅಭಿಮತ:
ಕೊರಗ ಸಮಾಜದ ಅಭಿವೃದ್ಧಿ ಪ್ರಮುಖಗುರಿಯಾಗಿದೆ. ಸಮಾಜದ ಮುಖ್ಯವಾಹಿನಿಗೆ ಬಂದಿರುವ ಕೊರಗ ಸಮುದಾಯದ ಎಲ್ಲಾ ಸಮಸ್ಯೆಗಳು ಪರಿಹಾರವಾಗಬೇಕು. ಈ ನಿಟ್ಟಿನಲ್ಲಿ ಕೊಂಡೆವೂರು ಮಠವು ನಿರಂತರ ಶ್ರಮಿಸುತ್ತಿದೆ. ಅಲ್ಲದೆ ವಿವಿಧ ವಲಯಗಳ ಪ್ರಮುಖರು, ಕೊಡುಗೈ ದಾನಿಗಳು, ಸಮಾಜ ಸೇವಕರು ಸಹಕರಿಸುತ್ತಿದ್ದಾರೆ. ಕೊರಗ ಸಮಾಜದ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವುದು ಪ್ರಥಮ ಆದ್ಯತೆಯಾಗಿದೆ.
-ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ
ಕೊಂಡೆವೂರು ಮಠ