ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ' ಕನ್ನಡ ಮೈತ್ರಿ ಸಂಗಮ' ಜ. 30ರಂದು ಸಂಜೆ 4ಕ್ಕೆ ಕಾಸರಗೋಡು ತಾಳಿಪಡ್ಪಿನಲ್ಲಿರುವ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಮಾರ್ಗದರ್ಶಕರ, ಯುವ ಕಾರ್ಯಕರ್ತರ, ಕನ್ನಡ ಪರ ಸಂಘಟನೆಗಳ ಸಾರಥಿಗಳ ಮತ್ತು ಕನ್ನಡ ಮಾಧ್ಯಮ ಪತ್ರಕರ್ತರನ್ನೊಳಗೊಂಡ ಸ್ನೇಹಕೂಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಐ ವಿ ಭಟ್ ಅವರಿಗೆ ಅಭಿನಂದನೆ ಮತ್ತು 'ಸ್ಥಿತಪ್ರಜ್ಞ 'ಕೃತಿಯ ಅವಲೋಕನ ನಡೆಯುವುದು.
ಹಿರಿಯ ಸಾಹಿತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶಕ ಸಮಿತಿ ಸದಸ್ಯ ಡಾ ಮುರಲೀ ಮೋಹನ ಚೂಂತಾರು, ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್ .ಕೆ ಮೋಹನ ದಾಸ್ ಮುಖ್ಯ ಅತಿಥಿಗಳಾಗಿರುವರು. ಹಿರಿಯ ಸಾಹಿತಿ ಹಿರಣ್ಯ ವೆಂಕಟೇಶ್ವರ ಭಟ್ ಅವರು ನ್ಯಾಯವಾದಿ ಐವಿ ಭಟ್ ಅವರ ಅಭಿನಂದನಾ ಗ್ರಂಥ 'ಸ್ಥಿತಪ್ರಜ್ಞ'ದ ಅವಲೋಕನ ನಡೆಸುವರು.