ನವದೆಹಲಿ: ಸಿಕ್ಖ್ ಪ್ರತ್ಯೇಕತಾವಾದಿ, ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ಪ್ರಕರಣದಲ್ಲಿ ವಕೀಲರ ನೆರವು ಪಡೆಯುವ ಸೌಲಭ್ಯ ಕಲ್ಪಿಸಬೇಕು ಎಂಬ ಭಾರತೀಯ ವ್ಯಕ್ತಿಯೊಬ್ಬರ ಕುಟುಂಬಸ್ಥರ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಪಿತೂರಿ ರೂಪಿಸಿದ್ದಾರೆಂಬ ಅಮೇರಿಕಾದ ಆರೋಪದ ಹಿನ್ನೆಲೆಯಲ್ಲಿ ಝೆಕ್ ಜೈಲಿನಲ್ಲಿರುವ ಭಾರತೀಯ ಮೂಲದ ನಿಖಿಲ್ ಗುಪ್ತಾ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ, ದೀಪಂಕರ್ ದತ್ತ ಅವರಿದ್ದ ಪೀಠ, ನಾವು ಹೆಚ್ಚಿನದ್ದನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ವಿಯೆನ್ನಾ ಸಮಾವೇಶದ ಪ್ರಕಾರ ನಿಮಗೆ ವಕೀಲಿಕೆಯ ನೆರವು ಪಡೆಯುವ ಅಧಿಕಾರವಿದೆ ಹಾಗೂ ಅದನ್ನು ಈಗಾಗಲೇ ಪಡೆದಿದ್ದೀರಿ ಎಂದು ಹೇಳಿದೆ.
ನ್ಯಾಯಾಲಯವು ವಿದೇಶಿ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಮತ್ತು ಸಾರ್ವಭೌಮತ್ವವನ್ನು ಗೌರವಿಸಬೇಕು ಮತ್ತು ಆ ದೇಶದ ಕಾನೂನನ್ನು ಗೌರವಿಸಬೇಕು ಮತ್ತು ಆದ್ದರಿಂದ ಈ ಅರ್ಜಿ ವಿಷಯದ ಅರ್ಹತೆ ಹೊಂದಿರುವುದಿಲ್ಲ ಎಂದು ಗುಪ್ತಾ ಅವರ ಸಂಬಂಧಿಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿಎ ಸುಂದರಂ ಗೆ ನ್ಯಾಯಪೀಠ ಹೇಳಿದೆ.
"ವಿದೇಶಿ ನ್ಯಾಯಾಲಯದ ಬಗ್ಗೆ ಏನನ್ನೂ ಮಾತನಾಡಲು ನಾವು ನಿಮಗೆ ಅವಕಾಶ ನೀಡುವುದಿಲ್ಲ" ಎಂದು ಪೀಠ ಸುಂದರಂಗೆ ತಿಳಿಸಿದೆ. ಗುಪ್ತಾ ಅವರನ್ನು ಏಕಾಂತ ಬಂಧನದಲ್ಲಿ ಇರಿಸಲಾಗಿದೆ ಮತ್ತು ಅವರ ದೋಷಾರೋಪಣೆಯ ನಂತರ ಯಾವುದೇ ವಕೀಲರ ನೆರವಿಗೆ ಅವಕಾಶ ನೀಡಲಾಗಿಲ್ಲ ಕೋರ್ಟ್ ನಲ್ಲಿ ಗುಪ್ತಾ ಕುಟುಂಬದ ಪರ ವಕೀಲರು ವಾದ ಮಂಡಿಸಿದ್ದರು.