ಕಾಸರಗೋಡು|: ಪತ್ರಿಕಾ ರಂಗದ ಸಮಗ್ರ ಸಾಧನೆಗೆ ನವದೆಹಲಿಯ ಅಸೋಸಿಯೇಷನ್ ಫಾರ್ ಎಕನಾಮಿಕ್ ಗ್ರೋತ್ ಸಂಘಟನೆಯು ಕೊಡಮಾಡುವ ಈ ಸಾಲಿನ ಅಂತಾರಾಷ್ಟ್ರೀಯ ಪ್ರಶಸ್ತಿ 'ಇಂಟರ್‍ನ್ಯಾಷನಲ್ ಸ್ಟೇಟಸ್ ಅವಾರ್ಡ್ ಫಾರ್ ಜರ್ನಲಿಸಂ' ಕಾಸರಗೋಡಿನ ಪತ್ರಕರ್ತ, ಲೇಖಕ ರವಿ ನಾಯ್ಕಾಪು ಅವರಿಗೆ ದುಬೈಯಲ್ಲಿ ಪ್ರದಾನ ಮಾಡಲಾಯಿತು. ಪ್ರಮುಖ ಪ್ರವಾಸಿ ತಾಣ ಬರ್ ದುಬೈಯ ಹಾಲಿಡೇ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಶಸ್ತಿಪ್ರದಾನ ಮಾಡಲಾಯಿತು.
ಯು.ಎ.ಇಯ ಅಲ್ ಐದ್ರೂಸ್ ಸಮೂಹ ಸಂಸ್ಥೆಗಳ ಸ್ಥಾಪಕ ಮುಹಮ್ಮದ್ ಅಲ್ ಐದ್ರೂಸ್ ಅವರು ಶಾಲು ಹೊದಿಸಿ, ಸ್ಮರಣಿಕೆ, ಪ್ರಶಸ್ತಿ ಫಲಕ, ಪದಕ ಒಳಗೊಂಡ ಪ್ರಶಸ್ತಿ ಪ್ರದಾನ ಮಾಡಿದರು. ಹಿರಿಯ ಮಾಧ್ಯಮ ತಜ್ಞೆ, ಗಲ್ಫ್ ಕೊರಿಯನ್ ಟೈಮ್ಸ್ ಮಾಲಕಿ ಮಿಸೂಕ್ ಜಂಗ್, ಅಂತಾರಾಷ್ಟ್ರೀಯ ಚಿತ್ರ ಕಲಾವಿದ ಅಹಮ್ಮದ್ ಅಲ್ ಅವಾದಿ, ಪೀಟರ್ ಗ್ರೆಸ್ ಮ್ಯಾನ್, ಯು.ಎ.ಇಯ ಹಿರಿಯ ಕಾನೂನು ಸಲಹೆಗಾರ ವಕೀಲ ಇಬ್ರಾಹಿಂ ಖಲೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಮುಖರು ಉಪಸ್ಥಿತರಿದ್ದರು. ಸಂಘಟನೆಯ ಕಾರ್ಯದರ್ಶಿ ಜಫರ್ ಶಮೀನ್ ಸ್ವಾಗತಿಸಿದರು. ಸಂಯೋಜಕ ರಾಜೀವ್ ಮಂಚಾಂದೋ ಪ್ರಶಸ್ತಿ ವಿಜೇತರನ್ನು ಪರಿಚಯಿಸಿದರು. ಕಾಸರಗೋಡು ಕನ್ನಡಮಾಧ್ಯಮ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ ತೆಕ್ಕೆಮೂಲೆ ಹಾಗೂ ಉಪಾಧ್ಯಕ್ಷ ಪುರುಷೋತ್ತಮ ಪೆರ್ಲ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.