ಕುಂಬಳೆ: ಹವ್ಯಕ ಸಮಾಜದ ಪ್ರಧಾನ ಆರಾಧನಾ ಕೇಂದ್ರಗಳಲ್ಲೊಂದಾದ ಕಾನ ಶ್ರೀ ಶಂಕರನಾರಾಯಣ ದೇವರ ಮಠದಲ್ಲಿ ಹೊಸ್ತಿನ ದೇವಕಾರ್ಯ ಮತ್ತು ಶ್ರೀ ಧೂಮಾವತೀ ದೈವದ ಪುದ್ವಾರು ಕೋಲ ಶನಿವಾರ ಮತ್ತು ಭಾನುವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸ|ಂಪನ್ನಗೊಂಡಿತು.
ಜ.26 ಶುಕ್ರವಾರ ಬೆಳಗ್ಗೆ 7 ಕ್ಕೆ ಶ್ರೀಧೂಮಾವತೀ ಸನ್ನಿಧಿಯಲ್ಲಿ ಆಚಾರ್ಯರಿಂದ ಪಂಚಗವ್ಯ ಹವನ, ಕಲಶಾಭಿಷೇಕ, 10 ಕ್ಕೆ ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಕೊಪ್ಪರಿಗೆ ಮುಹೂರ್ತ ನಡೆಯಿತು. ಶನಿವಾರ 6.30ಕ್ಕೆ ಆಚಾರ್ಯರಿಂದ ಗಣಪತಿ ಹೋಮ, ಪಂಚಗವ್ಯ ಹೋಮ, ನವಕಾಭಿಷೇಕ, 8 ಕ್ಕೆ ಸಾಮೂಹಿಕ ರುದ್ರ ಪಾರಾಯಣ, 10.30ಕ್ಕೆ ತುಲಾಭಾರ ಸೇವೆ, 11 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂತರ್ಪಣ ನಡೆಯಿತು. ಸಂಜೆ 6.30ಕ್ಕೆ ಕಾವಿ ಸುಬ್ರಹ್ಮಣ್ಯ ಯಕ್ಷ ಬಳಗ ವರ್ಕಾಡಿ ಇವರಿಂದ ಇಂದ್ರಜಿತು ಕಾಳಗ ತಾಳಮದ್ದಳೆ ಪ್ರಸ್ತುತಿಗೊಂಡಿತು. ರಾತ್ರಿ 7.30ಕ್ಕೆ ಭಂಡಾರ ಮನೆಯಿಂದ ಶ್ರೀ ಧೂಮಾವತೀ ದೈವದ ಭಂಡಾರ ಹೊರಟು ದೈವಸ್ಥಾನದಲ್ಲಿ ತಂಬಿಲ ಮುಗಿಸಿ ಶ್ರೀ ಶಂಕರನಾರಾಯಣ ದೇವರ ಮಠಕ್ಕೆ ಆಗಮನ, ದೇವರಿಗೆ ಮಹಾಪೂಜೆ, ಶ್ರೀ ಧೂಮಾವತೀ ದೈವದ ತೊಡಂಙಲ್ ನಡೆಯಿತು. ಭಾನುವಾರ ಬೆಳಗ್ಗೆ 9.30ಕ್ಕೆ ಶ್ರೀ ಧೂಮಾವತೀ ದೈವದ ಕೋಲ ನಡೆಯಿತು. ಬಳಿಕ ಅರಸಿನ ಪ್ರಸಾದ ವಿತರಣೆ, ಅನ್ನದಾನಗಳೊಂದಿಗೆ ವಾರ್ಷಿಕ ಉತ್ಸವ ಮುಕ್ತಾಯಗೊಂಡಿತು.
ದಕ್ಷಿಣ ಕೇರಳದ ತ್ರಿಶೂರ್, ಪಾಲಕ್ಕಾಡ್, ಸಹಿತ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರಕನ್ನಡ, ಬೆಂಗಳೂರುಗಳಿಂದ ಸಾವಿರಾರು ಸಂಖ್ಯೆಯ ಕಾನ ಮೂಲದ ಭಕ್ತರು ಭಾಗವಹಿಸಿದ್ದರು.