ಎರ್ನಾಕುಳಂ: ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡವರಿಗೆ ಪೋಲೀಸ್ ರಕ್ಷಣೆ ನೀಡಲು ಹೈಕೋರ್ಟ್ ನಿರ್ದೇಶಿಸಿದೆ.
ಪೋಲೀಸ್ ರಕ್ಷಣೆಗೆ ಆಗ್ರಹಿಸಿ ಪದ್ಮಶ್ರೀ ವಿಜೇತ ಬಾಲನ್ ಪುತ್ತೇರಿ ಸೇರಿದಂತೆ ಎಂಟು ಮಂದಿ ಸೆನೆಟರ್‍ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ. ಅವರ ಜೀವ ಮತ್ತು ಆಸ್ತಿಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸೆನೆಟ್ ಸಭೆಗಳಲ್ಲಿ ಅವರು ಭಾಗವಹಿಸಲು ಅಡ್ಡಿಯಾಗದಂತೆ ಹೈಕೋರ್ಟ್ ಪೋಲೀಸರಿಗೆ ನಿರ್ದೇಶನ ನೀಡಿದೆ.
ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ಕುಲಸಚಿವರ ಸೂಚನೆ ಮೇರೆಗೆ ಸೆನೆಟ್ ಸಭೆಯಲ್ಲಿ ಭಾಗವಹಿಸಲು ಪದ್ಮಶ್ರೀ ಬಾಲನ್ ಪುತ್ತೇರಿ ಮತ್ತಿತರರು ಡಿ.21ರಂದು ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಆದರೆ ಗೇಟ್ ಮುಂದೆ ಎಸ್‍ಎಫ್‍ಐ ಕಾರ್ಯಕರ್ತರು ತಡೆದು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಬಾಲನ್ ಪುತ್ತೇರಿ, ಅಫ್ಜಲ್ ಜಹೀರ್, ಎ.ಕೆ.ಅನುರಾಜ್, ಎ.ಆರ್.ಪ್ರವೀಣಕುಮಾರ್, ಸಿ.ಮನೋಜ್, ಎ.ವಿ.ಹರೀಶ್, ಸ್ನೇಹಾ ಸಿ.ನಾಯರ್ ಮತ್ತು ಅಶ್ವಿನ್ ರಾಜ್ ಪಿ.ಎಂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ದೂರು ನೀಡಿದರೂ ಪೆÇಲೀಸರು ಕ್ರಮ ಕೈಗೊಳ್ಳಲು ಅಥವಾ ಭದ್ರತೆ ನೀಡಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ. ಅಡ್ವ.ಆರ್.ವಿ.ಶ್ರೀಜಿತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.