ಇಸ್ಲಾಮಾಬಾದ್: ಇರಾನ್‌ನ ಉಗ್ರ ನೆಲೆಗಳ ಮೇಲೆ ಪಾಕಿಸ್ತಾನ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಈ ಮೂಲಕ ತನ್ನ ವಿರುದ್ಧದ ದಾಳಿಗೆ ಪಾಕಿಸ್ತಾನ ಸೇಡು ತೀರಿಸಿಕೊಂಡಿದೆ.
ಬಲೂಚಿಸ್ತಾನ ಪ್ರತ್ಯೇಕವಾದಿ ಸಂಘಟನೆಗಳಾದ ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಹಾಗೂ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಸಂಘಟನೆಯ ನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
'ಪಾಕಿಸ್ತಾನಿ ವಿರೋಧಿ ಉಗ್ರಗಾಮಿ ಸಂಘಟನೆ ಮೇಲೆ ದಾಳಿ ನಡೆಸಲಾಗಿದೆ ಎಂದಷ್ಟೇ ನಾನು ಹೇಳಬಲ್ಲೆ' ಎಂದು ಪಾಕಿಸ್ತಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿಸ್ತಾನ್-ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಹಳ್ಳಿಗಳ ಮೇಲೆ ಮಿಸೈಲ್ ದಾಳಿ ನಡೆದಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಈ ದಾಳಿಯಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಇವರು ಯಾರೂ ಇರಾನ್ ಪ್ರಜೆಗಳಲ್ಲ ಎಂದು ಮೂಲಗಳು ವರದಿ ಮಾಡಿವೆ.
ಒಂದು ದಿನದ ಹಿಂದಷ್ಟೇ ಪಾಕಿಸ್ತಾನದ ಬಲೂಚಿಸ್ತಾನದ ಜೈಷ್ ಅಲ್ ಅದ್ಲ್ ಉಗ್ರ ಸಂಘಟನೆಯ ಎರಡು ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು. ಮೂವರು ಗಾಯಗೊಂಡಿದ್ದರು.
ಈ ದಾಳಿ ತನ್ನ ವಾಯುಸೀಮೆ ಹಾಗೂ ಸಾರ್ವಭೌಮತೆಯ ಉಲ್ಲಂಘನೆ ಎಂದು ಪಾಕಿಸ್ತಾನ ಹೇಳಿತ್ತು. ಈ ಕಾನೂನುಬಾಹಿರ ಕೃತ್ಯಕ್ಕೆ ತಿರುಗೇಟು ನೀಡುವ ಅಧಿಕಾರವೂ ತನಗಿದೆ ಎಂದು ಹೇಳಿತ್ತು.