ತಿರುವನಂತಪುರಂ: ಪ್ರತಿಯೊಬ್ಬ ರಾಮಭಕ್ತರೂ ಬಿಜೆಪಿಯ ಬೆಂಬಲಿಗರಲ್ಲ ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ, ಸಂಸದ ಶಶಿ ತರೂರ್ ಹೇಳಿದ್ದಾರೆ.
ನನ್ನನ್ನು ಸೇರಿದಂತೆ ಶ್ರೀರಾಮನ ಭಕ್ತರು ಅನೇಕರಿದ್ದಾರೆ. ಅವರೆಲ್ಲರೂ ಭಕ್ತಿಯನ್ನು ವ್ಯಕ್ತಪಡಿಸಲು ಮುಂದಿನ ದಿನಗಳಲ್ಲಿ ಅಯೋಧ್ಯೆಯಲ್ಲಿರುವ ರಾಮಮಂದಿರಕ್ಕೆ ಹೋಗಬಹುದು ಎಂದು ಅವರು ಹೇಳಿದರು.
ಜಾತ್ಯತೀತತೆ ಎಂದರೆ ಧರ್ಮದ ಅನುಪಸ್ಥಿತಿಯಲ್ಲ, ಬಹುತ್ವ ಅದರರ್ಥವಾಗಿದೆ. ಪ್ರತಿಯೊಬ್ಬರು ತಮ್ಮ ಇಚ್ಛೆಯ ಧರ್ಮವನ್ನು ಪ್ರತಿಪಾದಿಸಬಹುದು ಎಂದು ಅವರು ತಿಳಿಸಿದರು.
ಕೇರಳ ವಿದ್ಯಾರ್ಥಿಗಳ ಸಂಘಟನೆ ಆಯೋಜಿಸಿದ್ದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತರೂರ್, 'ನಾನು ನಂಬುವ ಮತ್ತು ಪ್ರತಿದಿನ ಪ್ರಾರ್ಥಿಸುವ ದೇವರನ್ನು ಬಿಜೆಪಿಗೆ ಏಕೆ ಬಿಟ್ಟುಕೊಡಬೇಕು ಎಂದು ನನಗೆ ತಿಳಿಯುತ್ತಿಲ್ಲ. ಬಿಜೆಪಿ ಎಲ್ಲಾ ರಾಮಭಕ್ತರು ತಮಗೆ ಮತ ಹಾಕಬೇಕು ಎಂದು ಬಯಸಬಹುದು. ಆದರೆ, ಪ್ರತಿಯೊಬ್ಬ ರಾಮಭಕ್ತನೂ ಬಿಜೆಪಿಯ ಬೆಂಬಲಿಗರೇ ಎಂಬುದು ನನ್ನ ಪ್ರಶ್ನೆ. ಪ್ರತಿಯೊಬ್ಬ ರಾಮಭಕ್ತರೂ ಬಿಜೆಪಿ ಬೆಂಬಲಿಗರಲ್ಲ ಇದು ನನ್ನ ಅಭಿಪ್ರಾಯ. ಕಾಂಗ್ರೆಸ್ ಏಕೆ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಬೇಕು ಎಂದು ಪ್ರಶ್ನಿಸಿದರು. ನಮಗೂ ಧರ್ಮವಿದೆ ನಾವು ಕೂಡ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬಹುದು' ಎಂದು ಅವರು ಹೇಳಿದರು.
'ಪಕ್ಷದಲ್ಲಿ ಯಾರೂ ರಾಮಮಂದಿರವನ್ನು ವಿರೋಧಿಸುತ್ತಿಲ್ಲ. ಆದರೆ ನಾವು ಆ ಕಾರ್ಯಕ್ರಮವನ್ನು ಮಾತ್ರ ವಿರೋಧಿಸಿದ್ದೇವೆ. ನಾನು ಒಂದು ದಿನ ಅಯೋಧ್ಯೆಗೆ ಹೋಗುತ್ತೇನೆ. ರಾಜಕೀಯ ಕಾರಣಕ್ಕಾಗಿ ಅಲ್ಲ, ಪ್ರಾರ್ಥನೆ ಸಲ್ಲಿಸಲು' ಎಂದು ಅವರು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಬೇಕೆಂದು ಪ್ರತಿಯೊಬ್ಬ ಹಿಂದೂವು ಅಪೇಕ್ಷಿಸಬಹುದು. ಆದರೆ, ಅದನ್ನು ಕಟ್ಟಲು ಮಸೀದಿಯನ್ನು ಕೆಡವುದರ ಅಗತ್ಯವಿಲ್ಲ ಎಂದು ನಾನು ಈ ಹಿಂದೆಯೂ ಹೇಳಿದ್ದೇನೆ ಎಂದು ತರೂರ್ ಪುನರುಚ್ಚರಿಸಿದರು.
ರಾಮನ ಚಿತ್ರ ಪೋಸ್ಟ್ ಮಾಡಿದ್ದ ತರೂರ್
ಅಯೋಧ್ಯೆಯ ಬಾಲರಾಮನ ವಿಗ್ರಹದ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಶಶಿ ತರೂರ್, 'ಸಿಯಾವರ್ ರಾಮ್ ಕೀ ಜೈ' ಎಂದು ಬರೆದುಕೊಂಡಿದ್ದರು. ಇದನ್ನು ವಿರೋಧಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಮತ್ತು ಭ್ರಾತೃತ್ವ ಸದಸ್ಯರು ಪ್ರತಿಭಟನೆ ನಡೆಸಿದ್ದರು.
ಶಶಿ ತರೂರ್ ಅವರ ವಿರುದ್ಧ ಬ್ಯಾನರ್ ಹಾಗೂ ಫಲಕಗಳನ್ನು ಹಿಡಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದರು. ಇದು ನಾಚಿಗೇಡಿನ ನಡೆ. ನೀವು ಪ್ರಜಾಪ್ರಭುತ್ವ ಜಾತ್ಯತೀತ ರಾಷ್ಟ್ರಕ್ಕೆ ಕಳಂಕ ಎಂದು ಹೇಳಿದ್ದರು.