ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸಮಕಾಲೀನ ಜಗತ್ತಿನ ಭೌಗೋಳಿಕ ರಾಜಕೀಯ ವಾಸ್ತವತೆಯನ್ನು ಪ್ರತಿಬಿಂಬಿಸುತ್ತಿಲ್ಲ, ಹೀಗಾಗಿ ಅದರ ಸುಧಾರಣೆ ಅತ್ಯಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನಿಸ್ ಫ್ರಾನ್ಸಿಸ್ ಪ್ರತಿಪಾದಿಸಿದ್ದಾರೆ.

ಭಾರತಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಫ್ರಾನ್ಸಿಸ್, ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಭದ್ರತಾ ಮಂಡಳಿಯು ಇತ್ತೀಚಿನ ವರ್ಷಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದಕ್ಕೂ ಮುನ್ನ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಜೊತೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲೂ ಅವರು, 'ಭದ್ರತಾ ಮಂಡಳಿಯ ಸುಧಾರಣೆ ಆಗಬೇಕಿದೆ' ಎಂದು ಪ್ರತಿಪಾದಿಸಿದರು.
ಆಫ್ರಿಕನ್ ಒಕ್ಕೂಟಕ್ಕೆ ಜಿ-20 ಸದಸ್ಯತ್ವ ನೀಡುವಲ್ಲಿ ಭಾರತ ವಹಿಸಿದ ಪಾತ್ರವನ್ನು ಶ್ಲಾಘಿಸಿದ ಅವರು, ಭಾರತದ ಈ ಕಾರ್ಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದರ ನಾಯಕತ್ವವನ್ನು ಪ್ರದರ್ಶಿಸುತ್ತದೆ ಎಂದರು.
ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದಂತೆ ಭಾರತ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. ಅಲ್ಲದೆ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕಾಗಿ ಭಾರತ ಪ್ರಬಲ ಸ್ಪರ್ಧಿಯೂ ಆಗಿದೆ.
ಪ್ರಸ್ತುತ ಭದ್ರತಾ ಮಂಡಳಿಯು ಐದು ಕಾಯಂ ಸದಸ್ಯರು ಮತ್ತು 10 ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಕಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ಸಾಮಾನ್ಯ ಸಭೆಯಿಂದ ಎರಡು ವರ್ಷಗಳ ಅವಧಿಗೆ ಚುನಾಯಿಸಲಾಗುತ್ತದೆ. ರಷ್ಯಾ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ಅಮೆರಿಕ ಕಾಯಂ ಸದಸ್ಯ ರಾಷ್ಟ್ರಗಳಾಗಿದ್ದು, ವೀಟೊ ಅಧಿಕಾರ ಹೊಂದಿವೆ.