ಕಾಸರಗೋಡು: ಒಂದೂವರೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ನೋಂದಣಿ ಇಲಾಖೆಯು ಬದಲಾವಣೆಯ ಹಾದಿಯಲ್ಲಿದ್ದು, ಡಿಜಿಟಲೀಕರಣದ ಮೂಲಕ ಮಾಹಿತಿ ಜನರ ಬೆರಳ ತುದಿಯಲ್ಲಿ ಲಬ್ಯವಾಗುವಂತಾಗಿದೆ ಎಂದು ನೋಂದಣಿ, ವಸ್ತು ಸಂಗ್ರಹಾಲಯಗಳು, ದಾಖಲೆ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ತಿಳಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ನೋಂದಣಿಇಲಾಖೆಯ ಡಿಜಿಟಲೀಕರಣ ಉದ್ಘಾಟಿಸಿ ಮಾತನಾಡಿದರು. ದಾಖಲೆಗಳ ಡಿಜಿಟಲೀಕರಣವು ಇಲಾಖೆಯ ಸೇವೆಗಳನ್ನು ಆಧುನೀಕರಣಗೊಳಿಸುವ ಮತ್ತು ವೇಗಗೊಳಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ. ಎಂದು ಸಚಿವರು ಹೇಳಿದರು. ಸಾರ್ವಜನಿಕರು ಸುಲಭವಾಗಿ ತಮ್ಮ ಎಲ್ಲಾ ದಾಖಲೆಗಳನ್ನು ಹೊಂದಬಹುದು ಜತೆಗೆ ಇಲಾಖೆಯ ಹೆಚ್ಚಿನ ಸೇವೆಗಳು ಪಾರದರ್ಶಕವಾಗಿರಲಿದೆ. ಡಿಜಿಟಲೀಕರಣ ಪೂರ್ಣಗೊಂಡಿರುವ ಕಾಸರಗೋಡು, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ರಾಜ್ಯಮಟ್ಟದ ಉದ್ಘಾಟನೆಯನ್ನು ಸಚಿವರು ಏಕಕಾಲಕ್ಕೆ ನಿರ್ವಹಿಸಿದರು.
ಸರ್ವರಿಗೂ ಭೂಮಿ ಎಂಬ ನೀತಿ, ದಾಖಲೆಗಳ ಅನುಷ್ಠಾನದ ಅಂಗವಾಗಿ ನಾಲ್ಕು ವರ್ಷಗಳ ಕಾಲ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಕೇರಳವನ್ನು ಡಿಜಿಟಲ್ ಸರ್ವೆ ಮಾಡಿ ನಿಖರ ದಾಖಲೆಗಳನ್ನು ಸಿದ್ಧಪಡಿಸಲು ಡಿಜಿಟಲ್ ಸರ್ವೆ ಯೋಜನೆ'ನನ್ನ ಭೂಮಿ' ಯೋಜನೆಯನ್ನು ಸರ್ಕಾರ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡಿದರು. ಶಾಸಕರಾದ ಎಂ.ರಾಜಗೋಪಾಲನ್, ಇ.ಚಂದ್ರಶೇಖರನ್, ವಕೀಲ ಸಿ.ಎಚ್.ಕುಞಂಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾದರ್ ಬದರಿಯಾ, ಕಾಸರಗೋಡು ಎನ್‍ಐಸಿ ಜಿಲ್ಲಾ ಅಧಿಕಾರಿ ಕೆ.ಲೀನಾ ಉಪಸ್ಥಿತರಿದ್ದರು. ನೋಂದಣಿ ಇಲಾಖೆ ಮಹಾನಿರೀಕ್ಷಕ ಶ್ರೀಧನ್ಯಾ ಸುರೇಶ್ ಸ್ವಾಗತಿಸಿದರು. ಉತ್ತರ ವಲಯದ ಉಪ ಮಹಾನಿರೀಕ್ಷಕ ಕೆ.ಸಿ.ಮಧು ವಂದಿಸಿದರು.