ಎರ್ನಾಕುಳಂ: ನವಕೇರಳ ಸಮಾವೇಶಕ್ಕೆ ಕಪ್ಪು ಬಣ್ಣದ ಚೂಡಿದಾರ್ ಧರಿಸಿ ಆಗಮಿಸಿದ್ದಕ್ಕಾಗಿ ಯುವತಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದ ದೂರಿನನ್ವಯ ಹೈಕೋರ್ಟ್ ಮಧ್ಯಪ್ರವೇಶಿಸಿದೆ.
ಕೊಲ್ಲಂ ತಳವೂರು ನಿವಾಸಿ ಅರ್ಚನಾ ಪೋಲೀಸರ ಕ್ರಮದಲ್ಲಿ ಸೂಕ್ತ ಪರಿಹಾರ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಘಟನೆಗೆ ಸಂಬಂಧಿಸಿದಂತೆ ವಿವರವಾದ ಅಫಿಡವಿಟ್ ಸಲ್ಲಿಸುವಂತೆ ಪೋಲೀಸರಿಗೆ ಹೈಕೋರ್ಟ್ ಸೂಚಿಸಿದೆ. ಹತ್ತು ದಿನಗಳ ನಂತರ ಅರ್ಚನಾ ಸಲ್ಲಿಸಿರುವ ಅರ್ಜಿಯನ್ನು ಮತ್ತೊಮ್ಮೆ ಪರಿಗಣಿಸಲಾಗುವುದು.
ಮಹಿಳೆಯು ತನ್ನ ಗಂಡನ ತಾಯಿಯೊಂದಿಗೆ ಡಿಸೆಂಬರ್ 18 ರಂದು ಕೊಲ್ಲಂ ಜಂಕ್ಷನ್‍ಗೆ ಆಗಮಿಸುತ್ತಿರುವ ನವ ಕೇರಳ ಸಮಾವೇಶ ವೀಕ್ಷಿಸಲು ಬಂದಿದ್ದರು. ಮುಖ್ಯಮಂತ್ರಿ ವಿರುದ್ಧ ಪ್ರತಿಭಟನೆ ನಡೆಸಲು ಕಪ್ಪು ಬಟ್ಟೆ ಧರಿಸಿ ಬಂದಿರುವ ಬಗ್ಗೆ ತಪ್ಪು ಮಾಹಿತಿ ಪಡೆದ ಪೋಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದರು.
ಕುನ್ನಿಕೋಡು ಪೋಲೀಸರ ವಶದಲ್ಲಿದ್ದಾಗ ಮಾನಸಿಕ ಒತ್ತಡ ಅನುಭವಿಸಿದ್ದೆ ಎಂದು ಮಹಿಳೆ ಹೇಳಿಕೆ ನೀಡಿದ್ದಾಳೆ. ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ತಿಳಿಸಿ ಪರಿಹಾರ ನೀಡುವಂತೆ ಅರ್ಚನಾ ಹೈಕೋರ್ಟ್ ಮೆಟ್ಟಿಲೇರಿದ್ದರು.