ಮಂಜೇಶ್ವರ : ಆರ್ಥಿಕ ಮುಗ್ಗಟಿನಿಂದ ಕೇರಳ ಸರ್ಕಾರ ನೀಡಬೇಕಾದ ಕ್ಷೇಮ ಪಿಂಚಣಿ ಯೋಜನೆ, ಲೈಫ್ ಯೋಜನೆ, ಮನೆ ದುರಸ್ಥಿ ಯೋಜನೆಗಳು ಬುಡಮೇಲಾಗುತಿದೆ. ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದೆ.
ಮುಖ್ಯವಾಗಿ ವೃದ್ಯಾಪ್ಯ ಪಿಂಚಣಿ, ದಿವ್ಯಾಂಗ ಪಿಂಚಣಿ, ವಿಧವಾ ಪಿಂಚಣಿಗಳು ಕಳೆದ ಆಗಸ್ಟ್ ತನಕ ಮಾತ್ರ ನೀಡಲಾಗಿದೆ. ಅದರಲ್ಲೂ ಜುಲೈ ತಿಂಗಳಲ್ಲಿ ಲಭಿಸದವರಿಗೆ ಆಗಸ್ಟ್‍ನಲ್ಲೂ ಪಿಂಚಣಿ ಹಣ ಬಂದಿಲ್ಲ. ಸರ್ಕಾರ ಉದ್ದೇಶಪೂರ್ವಕ ತಂತ್ರ ಹೆಣೆದಿರುವುದು ಈ ಮೂಲಕ ಬೆಳಕಿಗೆ ಬರುತ್ತಿದೆ ಎಂದವರು ತಿಳಿಸಿದರು.
ಪಿಂಚಣಿದಾರರಿಗೆ ಮಸ್ಟರಿಂಗ್ ಮಾಡಲು ಡಿಸೆಂಬರ್ ನಲ್ಲಿ ಆದೇಶ ನೀಡಲಾಗಿತ್ತು. ಆದರೆ ಜುಲೈ ತಿಂಗಳಿನಿಂದ ಹಣ ಲಭಿಸದವರು ಪ್ರಶ್ನಿಸಿದಾಗ ಮಸ್ಟರಿಂಗ್ ಆಗಿಲ್ಲ, ಆಧಾರ್ ನೀಡಿಲ್ಲ ಎಂದು ಹೇಳಿ ಪಿಂಚಣಿ ಫಲನುಭವಿಗಳನ್ನು ಸತಾಯಿಸಲಾಗುತ್ತಿದೆ. ಡಿಸೆಂಬರ್ ನಲ್ಲಿ ಮಸ್ಟರಿಂಗ್, ಆಧಾರ್ ಸಂಗ್ರಹಣೆ ಮಾಡಿ ಜುಲೈ ಬಳಿಕದ ಹಣ ನೀಡದೆ ಸರ್ಕಾರ ವಂಚಿಸುವುದು ಅಕ್ಷಮ್ಯ ಅಪರಾಧ. ಸರ್ಕಾರ ಜುಲೈ ನಲ್ಲೆ ಆಧಾರ್, ಮಸ್ಟರಿಂಗ್ ಮಾಡಿ ಜನತೆಗೆ ಹಣ ಸಿಗುವಂತೆ ಮಾಡಬೇಕಿತ್ತು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ಈ ಪರಿಪಾಠ ಇನ್ನೂ ಮುಂದುವರಿಸಿ ಇನ್ನೂ ನಾಲ್ಕು ತಿಂಗಳುಗಳ ಪಿಂಚಣಿ ಮೊತ್ತವನ್ನು ತಡೆ ಹಿಡಿಯುವ ಪ್ರಯತ್ನ ಸರ್ಕಾರದ್ದು ಎಂದು ಅವರು ಆರೋಪಿಸಿದರು. ತಮ್ಮ ಜೀವಿತ ಅವಧಿಯಲ್ಲಿ ದುಡಿದ ಕ್ಷೇಮ ನಿಧಿ, ಬೀಡಿ ಕಾರ್ಮಿಕರ ಪಿಂಚಣಿ ಇರುವವರಿಗೂ ಸರ್ಕಾರ ಈಗ ವೃದ್ಯಾಪ್ಯ ವೇತನ ಅಲಿಖಿತವಾಗಿ ತಡೆ ಹಿಡಿಯುತ್ತಿದೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು 50 ವರ್ಷ ಪೂರ್ತಿ ಆಗಿರಬೇಕೆಂಬ ಅಲಿಖಿತ ಆದೇಶ ಜಾರಿಯಲ್ಲಿದೆ. 50 ವರ್ಷ ಪೂರ್ತಿಯಾಗದೆ ವಿಧವಾ ಪೆನ್ಸನ್ ಅರ್ಜಿ ಹಾಕಲು ಆಗುತ್ತಿಲ್ಲ ಎಂದು ಬಿಜೆಪಿ ಸರ್ಕಾರದ ಕ್ರಮ ಖಂಡಿಸಿದೆ.
ಲೈಫ್ ಮಿಷನ್ ಹೆಸರಲ್ಲಿ ಮೊದಲ ಕಂತು ಮಾತ್ರ ನೀಡಲಾಗಿದೆ. ಸರ್ಕಾರದ ನೂತನ ಆದೇಶದ ಪ್ರಕಾರ 1ಲಕ್ಷ ಕಿಂತ ಹೆಚ್ಚಿನ ಹಣ ಖಜಾನೆಯಿಂದ ಹಿಂಪಡೆಯಲು ಆಗುತ್ತಿಲ್ಲ. ರಾಜ್ಯ ಸರ್ಕಾರ ಬಡ ಜನತೆಯನ್ನು ವಂಚಿಸುವುದನ್ನು ನಿಲ್ಲಿಸಬೇಕೆಂದು ಬಿಜೆಪಿ ಪ್ರಕಟಣೆಯಲ್ಲಿ ಅಗ್ರಹಿಸಿದೆ.