ಕೊಚ್ಚಿ: ಕೇರಳಕ್ಕೆ ಎರಡನೇ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರೀ ಸ್ವಾಗತ ನೀಡಲು ಸಜ್ಜೀಕರಣ ನಡೆಯುತ್ತಿದೆ. 50 ಸಾವಿರ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಕೊಚ್ಚಿಯಲ್ಲಿ ಸುಮಾರು ಒಂದು ಕಿಲೋಮೀಟರ್ ರೋಡ್ ಶೋ ನಡೆಸಲು ಸಿದ್ದತೆಗಳು ಸಾಗಿದೆ.
16ರಂದು ಸಂಜೆ 6 ಗಂಟೆಗೆ ಮಹಾರಾಜ ಕಾಲೇಜು ಮೈದಾನದಿಂದ ಆಸ್ಪತ್ರೆ ರಸ್ತೆ ಮೂಲಕ ಎರ್ನಾಕುಳಂ ಅತಿಥಿ ಗೃಹದವರೆಗೆ ಮೆರವಣಿಗೆ ನಡೆಯಲಿದೆ.
ಸರ್ಕಾರಿ ಅತಿಥಿ ಗೃಹದಲ್ಲಿ ಪ್ರಧಾನಿ ತಂಗಲಿದ್ದಾರೆ. ಪ್ರಧಾನಿಯವರು ವಿಶೇಷ ವಿಮಾನದ ಮೂಲಕ ಕೊಚ್ಚಿ ನೌಕಾ ವಿಮಾನ ನಿಲ್ದಾಣ ತಲುಪಲಿದ್ದು, ರಸ್ತೆ ಮೂಲಕ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಅವರನ್ನು ಅಭಿನಂದಿಸಲು ಜಿಲ್ಲೆಯ ವಿವಿಧೆಡೆಯಿಂದ 50 ಸಾವಿರ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುವುದು. ಮರುದಿನ ಬೆಳಗ್ಗೆ 7 ಗಂಟೆಗೆ ಹೆಲಿಕಾಪ್ಟರ್ ಮೂಲಕ ಗುರುವಾಯೂರಿಗೆ ತೆರಳಿ ದೇವಾಲಯಕ್ಕೆ ಭೇಟಿ ನೀಡಿ ಸುರೇಶ್ ಗೋಪಿ ಅವರ ಮಗಳ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಕೊಚ್ಚಿಗೆ ವಾಪಸಾಗಲಿರುವ ಪ್ರಧಾನಿ, ಕೊಚ್ಚಿನ್ ಶಿಪ್‍ಯಾರ್ಡ್‍ನಲ್ಲಿ ಅಂತರಾಷ್ಟ್ರೀಯ ಹಡಗು ದುರಸ್ತಿ ಸೌಲಭ್ಯ ಮತ್ತು ಡ್ರೈ ಡಾಕ್ ಅನ್ನು ಉದ್ಘಾಟಿಸಲಿದ್ದಾರೆ. 11 ಗಂಟೆಗೆ ರಾಜ್ಯ ಬಿಜೆಪಿಯ ‘ಶಕ್ತಿಕೇಂದ್ರ’ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಎರ್ನಾಕುಳಂ ಮೆರೈನ್ ಡ್ರೈವ್‍ನಲ್ಲಿ ಬೂತ್ ಮಟ್ಟದ ಸಾಂಸ್ಥಿಕ ಸಬಲೀಕರಣ ಸಮಿತಿ ನಡೆಯಲಿದೆ. ಈ ಸಮಾವೇಶದಲ್ಲಿ 7 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೃಷ್ಣಕುಮಾರ್ ಮಾಹಿತಿ ನೀಡಿರುವರು. ಬಳಿಕ ನರೇಂದ್ರ ಮೋದಿ ದೆಹಲಿಗೆ ಮರಳಲಿದ್ದಾರೆ.