ನವದೆಹಲಿ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಸ್ಥಾನವನ್ನು ಮತ್ತೆ ಕಲ್ಪಿಸಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕಾಯ್ದೆಗೆ 1981ರಲ್ಲಿ ಸಂಸತ್ತು ತಂದ ತಿದ್ದುಪಡಿಯನ್ನು ಕೇಂದ್ರ ಸರ್ಕಾರವು ಸಮರ್ಥಿಸಿಕೊಳ್ಳದೆ ಇದ್ದುದರ ಬಗ್ಗೆ ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.
'1981ರ ತಿದ್ದುಪಡಿ ಒಪ್ಪಿಕೊಳ್ಳು ವಿರಾ' ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಮಂದಿ ನ್ಯಾಯಮೂರ್ತಿಗಳ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಲ್ಲಿ ಕೇಳಿತು. 'ಒಪ್ಪುವುದಿಲ್ಲ' ಎಂಬ ಉತ್ತರ ಮೆಹ್ತಾ ಅವರಿಂದ ಬಂತು.
1981ರ ತಿದ್ದುಪಡಿಯು ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಎಎಂಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈ ಪೀಠ ನಡೆಸುತ್ತಿದೆ. 'ಸಂಸತ್ತು ತಂದ ತಿದ್ದುಪಡಿಯನ್ನು ನೀವು ಒಪ್ಪಿಕೊಳ್ಳದೆ ಇರುವುದು ಹೇಗೆ ಸಾಧ್ಯ? ದೇಶದ ಸಂವಿಧಾನದ ಪ್ರಕಾರ ಸಂಸತ್ತು ಶಾಶ್ವತವೂ, ಅವಿನಾಶಿಯೂ ಆದ ಸಂಸ್ಥೆ...' ಎಂದು ಪೀಠ ಹೇಳಿತು.
'ಈ ತಿದ್ದುಪಡಿಯ ಪರವಾಗಿ ನೀವಿರಬೇಕು' ಎಂದು ಪೀಠವು ಹೇಳಿತು. ಇದಕ್ಕೆ ಉತ್ತರವಾಗಿ ಮೆಹ್ತಾ ಅವರು, 'ನಾನು ಇಲ್ಲಿ ಸಾಂವಿಧಾನಿಕ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದೇನೆ. ಈ ತಿದ್ದುಪಡಿಯು ಕೆಲವು ಕಾರಣಗಳಿಗಾಗಿ ಅಸಾಂವಿಧಾನಿಕ ಎಂದು ಒಂದು ಆದೇಶದಲ್ಲಿ ಹೇಳಲಾಗಿದೆ. ಕಾನೂನು ಅಧಿಕಾರಿಯಾಗಿ, ಈ ಆದೇಶದಲ್ಲಿನ ನಿಲುವು ಸರಿಯಾಗಿರುವಂತೆ ಕಾಣುತ್ತಿದೆ ಎಂದು ಹೇಳುವ ಹಕ್ಕು, ಅಧಿಕಾರ ನನಗೆ ಇದೆ' ಎಂದು ಹೇಳಿದರು.
ತಾನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಕಾರಣ ನೀಡಿ ಎಎಂಯು, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮೀಸಲಾಗಿ ಇರಿಸಿತು. ಇದನ್ನು ಅಲಹಾಬಾದ್ ಹೈಕೋರ್ಟ್ 2005ರಲ್ಲಿ ರದ್ದುಪಡಿಸಿತು. ಈ ಆದೇಶವನ್ನು ಪ್ರಶ್ನಿಸಿ ಎಎಂಯು ಮತ್ತು ಕೇಂದ್ರ ಸರ್ಕಾರ 2006ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವು. ಆದರೆ 2016ರಲ್ಲಿ ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡ ಕೇಂದ್ರ ಸರ್ಕಾರವು, ಈ ವಿಶ್ವವಿದ್ಯಾಲಯಕ್ಕೆ ನೀಡಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂಬ ಸ್ಥಾನವನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿತು.