ನವದೆಹಲಿ: ದೇಶದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, 2021-22ರ ಅವಧಿಯಲ್ಲಿ ಒಟ್ಟು 4.33 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ.
ಅದಕ್ಕೂ ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ, ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದವರ ಸಂಖ್ಯೆಯಲ್ಲಿ 19 ಲಕ್ಷದಷ್ಟು ಏರಿಕೆಯಾಗಿದೆ ಎಂದು ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ (ಎಐಎಸ್‌ಎಚ್‌ಇ) ವರದಿ ತಿಳಿಸಿದೆ.
'ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 2020-21ರಲ್ಲಿ 2.01 ಕೋಟಿಯಷ್ಟಿದ್ದ ಹೆಣ್ಣು ಮಕ್ಕಳ ಸಂಖ್ಯೆ 2021-22ರಲ್ಲಿ 2.07 ಕೋಟಿಗೆ ಹೆಚ್ಚಳವಾಗಿದೆ' ಎಂದು ವರದಿ ಹೇಳಿದೆ.
'ಪಿಎಚ್.ಡಿಗೆ ಪ್ರವೇಶ ಪಡೆದ ಹೆಣ್ಣುಮಕ್ಕಳ ಸಂಖ್ಯೆ ಕಳೆದ ಏಳು ವರ್ಷಗಳಲ್ಲಿ ಇಮ್ಮಡಿಯಾಗಿದೆ. 2014-15 ರಲ್ಲಿ 0.48 ಲಕ್ಷ ಮಂದಿ ಪಿಎಚ್.ಡಿಗೆ ಪ್ರವೇಶ ಪಡೆದಿದ್ದರೆ, 2021-22ರಲ್ಲಿ ಈ ಸಂಖ್ಯೆ 0.99 ಲಕ್ಷಕ್ಕೆ ಏರಿಕೆಯಾಗಿದೆ' ಎಂಬ ಅಂಶ ವರದಿಯಲ್ಲಿದೆ.
'2021-22 ರಲ್ಲಿ ವಿಜ್ಞಾನ ವಿಷಯಗಳಲ್ಲಿ ಉನ್ನತ ಶಿಕ್ಷಣಕ್ಕೆ ಒಟ್ಟು 57.2 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದರಲ್ಲಿ ಹೆಣ್ಣುಮಕ್ಕಳು (29.8 ಲಕ್ಷ), ಗಂಡು ಮಕ್ಕಳನ್ನು (27.4 ಲಕ್ಷ) ಹಿಂದಿಕ್ಕಿದ್ದಾರೆ' ಎಂದಿದೆ.
'ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಏಳು ವರ್ಷಗಳಲ್ಲಿ ಶೇ.65.2 ಏರಿಕೆಯಾಗಿದೆ. 2014-15 ರಲ್ಲಿ 16.41 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರೆ, 2021-22 ರಲ್ಲಿ ಈ ಸಂಖ್ಯೆ 27.1 ಲಕ್ಷಕ್ಕೆ ಏರಿಕೆಯಾಗಿದೆ' ಎಂದು ವರದಿ ತಿಳಿಸಿದೆ.