ನವದೆಹಲಿ: ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ಅವಧಿ ವಿಮಾ ಸೌಲಭ್ಯ ಜಾರಿಗೊಳಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ನವದೆಹಲಿ: ಗಡಿ ರಸ್ತೆಗಳ ಸಂಸ್ಥೆ (ಬಿಆರ್‌ಒ) ಕೈಗೊಂಡಿರುವ ವಿವಿಧ ಮೂಲಸೌಕರ್ಯ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಕೂಲಿ ಕಾರ್ಮಿಕರಿಗೆ ಅವಧಿ ವಿಮಾ ಸೌಲಭ್ಯ ಜಾರಿಗೊಳಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ.
ಕಾಮಗಾರಿಯ ಸಮಯದಲ್ಲಿ ಕಾರ್ಮಿಕರು ಸಾವನ್ನಪ್ಪಿದರೆ ಈ ವಿಮಾ ಯೋಜನೆಯಡಿ ಅವರ ಅವಲಂಬಿತರಿಗೆ ₹10 ಲಕ್ಷ ಪರಿಹಾರ ಸಿಗಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
'ಬಿಆರ್‌ಒ/ ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ ಕೈಗೊಂಡಿರುವ ಯೋಜನೆಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರಿಗೆ ವಿಮಾ ಯೋಜನೆ ಪ್ರಾರಂಭಿಸುವ ಪ್ರಸ್ತಾಪವನ್ನು ರಕ್ಷಣಾ ಸಚಿವರು ಅನುಮೋದಿಸಿದ್ದಾರೆ' ಎಂದು ಸಚಿವಾಲಯ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
'ಈ ಯೋಜನೆಯು, ಅಪಾಯಕಾರಿ ತಾಣಗಳು, ದುರ್ಗಮ ಪ್ರದೇಶ, ಪ್ರತಿಕೂಲ ವಾತಾವರಣದಲ್ಲಿ ಕೆಲಸ ಮಾಡುವಾಗ ಅವಘಡ ಸಂಭವಿಸಿದರೆ ಅಥವಾ ಅನಾರೋಗ್ಯ ಪರಿಸ್ಥಿತಿಯಲ್ಲಿ ಸಾವು-ನೋವು ಸಂಭವಿಸಿದರೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ವಿಮಾ ರಕ್ಷಣೆ ಒದಗಿಸಲಿದೆ. ಇದರಿಂದ ಈ ಕಾರ್ಮಿಕರ ಕುಟುಂಬಗಳಿಗೆ ಜೀವನೋಪಾಯಕ್ಕೆ ದಾರಿ ಮತ್ತು ಸಾಮಾಜಿಕ ಭದ್ರತೆಯೂ ಸಿಗಲಿದೆ' ಎಂದು ಹೇಳಿದೆ.