ಕಾಸರಗೋಡು: ಸರ್ಕಾರ ಜಾರಿಗೊಳಿಸುತ್ತಿರುವ ಕಠಿಣ ಕಾನೂನುಗಳಿಂದ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ವತಿಯಿಂದ ಜ. 29ರಿಂದ 'ವ್ಯಾಪಾರ ಸಂರಕ್ಷಣಾ ಯಾತ್ರೆ'ಕಾಸರಗೋಡಿನಿಂದ ಆರಂಭಗೊಳ್ಳಲಿರುವುದಾಗಿ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಅಹಮ್ಮದ್ ಶೆರೀಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ರಾಜ್ಯಘಟಕ ಅಧ್ಯಕ್ಷ ರಾಜು ಅಪ್ಸರಾ ಜಾಥಾ ನೇತೃತ್ವ ವಹಿಸುವರು. ಪ್ಲಾಸ್ಟಿಕ್ ನಿಷೇಧ ಹೆಸರಲ್ಲಿ ವ್ಯಾಪಾರಿಗಳಿಗೆ ಎಸಗುತ್ತಿರುವ ದ್ರೋಹ ನಿಲ್ಲಿಸಬೇಕು, ಹೆದ್ದಾರಿ ಅಬಿವ್ರದ್ಧಿ ಹೆಸರಲ್ಲಿ ತೆರವುಗೊಳಿಸಲ್ಪಟ್ಟ ವ್ಯಾಪಾರಿಗಳಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು, ಆನ್‍ಲೈನ್ ವ್ಯಾಪಾರದಿಂದ ಉಂಟಾಗುತ್ತಿರುವ ಸಮಸ್ಯೆ, ವಿದ್ಯುತ್ ದರ ಏರಿಕೆ, ಲೈಸನ್ಸ್ ನವೀಕರಣೆಗೆ ಸ್ಥಳೀಯಾಡಳಿತ ಸಂಸ್ಥೆಗಳು ವಿಧಿಸುತ್ತಿರುವ ನಿಬಂಧನೆ, ಜಿಎಸ್‍ಟಿ ವಿಭಾಗದ ಅತಿಯಾದ ದಂಡದಿಂದ ಉಮಟಗುವ ಸಂಕಷ್ಟ ಪರಿಹರಿಸಬೇಕು ಇದೇ ಮುಂತಾದ 29ಬೇಡಿಕೆ ಮುಂದಿರಿಸಿ ಜಾಥಾ ನಡೆಯಲಿದೆ.
ಜ. 29ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಹಳೇ ಪ್ರೆಸ್‍ಕ್ಲಬ್‍ನ ಚಂದ್ರಗಿರಿ ಜಂಕ್ಷನ್ ಸನಿಹ ನಡೆಯುವ ಸಮಾರಂಭದಲ್ಲಿ ಸಂಘಟನೆ ರಾಜ್ಯ ಸಮಿತಿ ಉಪಾದ್ಯಕ್ಷ ಹಾಗೂ ತಿರುವನಂತಪುರ ಜಿಲ್ಲಾ ಸಮಿತಿ ಅಧ್ಯಕ್ಷ ರಾಮಚಂದ್ರನ್ ಪೆರಿಂಙಮಲೆ ಜಾಥಾ ಉದ್ಘಾಟಿಸುವರು. ರಾಜ್ಯ ಸಮಿತಿ ಉಪಾಧ್ಯಕ್ಷ ಹಾಗೂ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಅಹಮ್ಮದ್ ಶೆರೀಪ್ ಅಧ್ಯಕ್ಷತೆ ವಹಿಸುವರು. ರಾಜ್ಯದ ಎಲ್ಲ ಜಿಲ್ಲೆಗಳ ಮೂಲಕ ಸಂಚರಿಸಲಿರುವ ಜಾಥಾ ಫೆ, 13ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ. ಪುತ್ತರಿಕಂಡ ಮೈದಾನದಲ್ಲಿ ನಡೆಯಲಿರುವ ವ್ಯಾಪಾರಿಗಳ ಬೃಹತ್ ಸಮಾವೇಶದೊಂದಿಗೆ ಜಾಥಾ ಸಂಪನ್ನಗೊಳ್ಳಲಿದೆ. ಈ ಸಂದರ್ಭ 5ಲಕ್ಷ ವ್ಯಾಪಾರಿಗಳ ಸಹಿಯನ್ನೊಳಗೊಂಡ ಮನವಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಮರ್ಪಿಸಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಕೆ.ಜೆ ಸಜಿ, ಎ.ವಿ ಹರಿಹರಸುತನ್, ಕೆ. ದಿನೇಶ್, ಟಿ.ಎ ಇಲ್ಯಾಸ್ ಉಪಸ್ಥಿತರಿದ್ದರು.