ಈಶಾನ್ಯ ಕೌನ್ಸಿಲ್‌ನ 71ನೇ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ 2004ರಿಂದ 2014ರ ನಡುವೆ ಒಟ್ಟು 11,121 ಹಿಂಸಾತ್ಮಕ ಘಟನೆಗಳು ನಡೆದಿದ್ದವು. 2014ರಿಂದ 2023ರ ಅವಧಿಯಲ್ಲಿ ಅದು 3,113ಕ್ಕೆ ಇಳಿದಿದೆ. ಅಂದರೆ ಶೇ 73ರಷ್ಟು ಕುಸಿದಿದೆ ಎಂದು ಗೃಹ ಸಚಿವರು ಅಂಕಿ- ಅಂಶ ಸಹಿತ ಮಾಹಿತಿ ನೀಡಿದರು.
ಅಲ್ಲದೆ ಭದ್ರತಾ ಸಿಬ್ಬಂದಿಯ ಸಾವಿನ ಪ್ರಮಾಣವೂ ಶೇ 71ರಷ್ಟು ಕಡಿಮೆಯಾಗಿದೆ. ಹಾಗೆಯೇ ನಾಗರಿಕರ ಸಾವಿನ ಪ್ರಮಾಣವೂ ಶೇ 86ರಷ್ಟು ಕಡಿಮೆಯಾಗಿದೆ ಎಂದರು.
'ಕಳೆದ ಐದು ವರ್ಷಗಳಲ್ಲಿ ವಿವಿಧ ಉಗ್ರಗಾಮಿ ಗುಂಪುಗಳ 8,900ಕ್ಕೂ ಹೆಚ್ಚು ಸದಸ್ಯರು ಶರಣಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ. ಹೀಗಾಗಿ ಬಂಡಾಯ, ಸಂಘರ್ಷಗಳು ಗಣನೀಯವಾಗಿ ತಗ್ಗಿವೆ. ಶಾಂತಿ ಮತ್ತು ಸಮೃದ್ಧಿಯು ಪರಸ್ಪರ ಸಂಬಂಧ ಹೊಂದಿದ್ದು, ಇವಿಲ್ಲದೆ ರಾಜ್ಯಗಳು ಮತ್ತು ದೇಶದ ಅಭಿವೃದ್ಧಿಗೆ ಅಸಾಧ್ಯ ಎಂಬ ಸಂದೇಶವನ್ನು ಇದು ಸಾರಿದೆ' ಎಂದರು.
'ಈಶಾನ್ಯ ಭಾರತದಲ್ಲಿ ಶಾಂತಿ, ಸ್ಥಿರತೆ ನೆಲೆಸುವಂತೆ ಮಾಡಲು ಮೋದಿ ಸರ್ಕಾರವು ಒಂಬತ್ತು ಒಪ್ಪಂದಗಳಿಗೆ ಸಹಿ ಹಾಕಿದೆ. ಅಲ್ಲದೆ ಬಾಕಿಯಿದ್ದ ಅನೇಕ ಕಾನೂನು ತೊಡಕುಗಳನ್ನು ಯಶಸ್ವಿಯಾಗಿ ಬಗೆಹರಿಸಿದೆ' ಎಂದು ತಿಳಿಸಿದರು.
'ಜನಾಂಗೀಯ, ಭಾಷೆ, ಗಡಿ ಸಮಸ್ಯೆಗಳು ಹಾಗೂ ಭಯೋತ್ಪಾದಕ ಗುಂಪುಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಪ್ರದೇಶದಲ್ಲಿ 10 ವರ್ಷಗಳಲ್ಲಿ ಶಾಂತಿ ನೆಲೆಯೂರಿದ್ದು, ಹೊಸ ಶಕೆ ಆರಂಭವಾಗಿದೆ. ಮೋದಿ ಸರ್ಕಾರವು ಯಾವಾಗಲೂ ಈಶಾನ್ಯ ಭಾರತವನ್ನು ದೇಶದ ಅತ್ಯಂತ ಮಹತ್ವದ ಭಾಗ ಎಂದೇ ಪರಿಗಣಿಸಿದೆ' ಎಂದು ಅಮಿತ್ ಶಾ ಹೇಳಿದರು.