ಉಪ್ಪಳ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಐ.ಪಿ ಮತ್ತು ತುರ್ತು ಚಿಕಿತ್ಸೆ ಪುನರಾರಂಭಗೊಂಡಿದೆ. ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ವಿಧಾನಸಭೆಯಲ್ಲಿ ಶಾಸಕ ಎಕೆಎಂ ಅಶ್ರಫ್ ಅವರಿಗೆ ಈ ಮಾಹಿತಿ ನೀಡಿದರು.
15ನೇ ಕೇರಳ ವಿಧಾನಸಭೆಯ 10ನೇ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸಚಿವರು ಈ ಕುರಿತು ಮಾಹಿತಿ ನೀಡಿದರು. ನಾಲ್ಕು ತಿಂಗಳ ಹಿಂದೆ ಮಂಗಲ್ಪಾಡಿ ತಾಲೂಕು ಕೇಂದ್ರ ಆಸ್ಪತ್ರೆ ಯಾವುದೇ ಮುನ್ಸೂಚನೆ ನೀಡದೆ ರಾತ್ರಿ ವೇಳೆ ಚಿಕಿತ್ಸೆ ಸ್ಥಗಿತಗೊಳಿಸಿತ್ತು. ಇದು ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಸ್ವತಃ ಶಾಸಕರೇ ಘೋಷಿಸುವ ಮೂಲಕ ಭಾರೀ ಪ್ರತಿಭಟನೆಗೆ ಕಾರಣವಾಯಿತು.
ಸಾಕಷ್ಟು ವೈದ್ಯರಿಲ್ಲದ ಕಾರಣ ಐಪಿ ಮತ್ತು ತುರ್ತು ಚಿಕಿತ್ಸಾ ವಿಭಾಗವನ್ನು ಸ್ಥಗಿತಗೊಳಿಸಲಾಗಿತ್ತು. ಈ ಕುರಿತು ಶಾಸಕರು ಈ ಹಿಂದೆಯೇ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ನಿರ್ದೇಶಕರಿಗೆ ಪತ್ರ ಕಳುಹಿಸಿದ್ದರು.
ತಾಲೂಕು ಆಸ್ಪತ್ರೆಯಲ್ಲಿ ಎಂಟು ವೈದ್ಯರ ಹುದ್ದೆಗಳಿವೆ. ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು. ಸಚಿವರು ಹೇಳಿಕೆ ನೀಡಿದ ಬೆನ್ನಿಗೇ ಸೋಮವಾರ ರಾತ್ರಿಯಿಂದ ಸೇವೆಗಳು ಆರಂಭಗೊಂಡಿವೆ.