ಕೋಝಿಕ್ಕೋಡ್: ಫೆಲೆಸ್ತೀನನ್ನು ಬೆಂಬಲಿಸಿ ಮತ್ತು ಬಹುರಾಷ್ಟ್ರೀಯ ಕಾಫಿ ಕಂಪನಿ ಸ್ಟಾರ್ ಬಕ್ಸ್ ಖಂಡಿಸಿ ಕೇರಳದ ಕೋಝಿಕ್ಕೋಡ್ ನಲ್ಲಿಯ ಅದರ ಮಳಿಗೆಯ ಹೊರಗೆ ಭಿತ್ತಿಪತ್ರಗಳನ್ನು ಅಂಟಿಸಿದ್ದ ಆರೋಪದಲ್ಲಿ ಆರು ಕಾಲೇಜು ವಿದ್ಯಾರ್ಥಿಗಳನ್ನು ಪೋಲಿಸರು ರವಿವಾರ ಬಂಧಿಸಿದ್ದಾರೆ.
ಇಸ್ರೇಲ್ ಗಾಝಾ ವಿರುದ್ಧ ಯುದ್ಧ ಸಾರಿದ ಬಳಿಕ ಸ್ಟಾರ್ ಬಕ್ಸ್ ವಿಶ್ವಾದ್ಯಂತ ಬಹಿಷ್ಕಾರಗಳನ್ನು ಎದುರಿಸುತ್ತಿದೆ. ಜಿಲ್ಲೆಯ ಫಾರೂಕ್ ಕಾಲೇಜಿನ ಈ ವಿದ್ಯಾರ್ಥಿಗಳು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವಿದ್ಯಾರ್ಥಿ ಘಟಕ ಫ್ರೆಟರ್ನಿಟಿ ಮೂವ್ಮೆಂಟ್ ಸದಸ್ಯರಾಗಿದ್ದಾರೆ ಎನ್ನಲಾಗಿದೆ.
ಸ್ಟಾರ್ ಬಕ್ಸ್ ಸಿಬ್ಬಂದಿಗಳ ದೂರಿನ ಮೇರೆಗೆ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ವಿದ್ಯಾರ್ಥಿಗಳನ್ನು ಶೀಘ್ರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದ್ದರೂ ಫ್ರೆಟರ್ನಿಟಿ ಮೂವ್ ಮೆಂಟ್ ಸದಸ್ಯರು ಪೋಲಿಸ್ ಕ್ರಮವನ್ನು ವಿರೋಧಿಸಿ ಸ್ಟಾರ್ ಬಕ್ಸ್ ಮಳಿಗೆಗೆ ಪ್ರತಿಭಟನಾ ಜಾಥಾ ನಡೆಸಿದ್ದರು.
ಕಾಫಿ ಕಂಪನಿಯ ಕಾರ್ಮಿಕರ ಸಂಘಟನೆ ಸ್ಟಾರ್ ಬಕ್ಸ್ ವರ್ಕರ್ಸ್ ಯುನೈಟೆಡ್ ಅ.9ರಂದು ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿಯ ಪೋಸ್ಟ್ ಬಲ್ಲಿ ಫೆಲೆಸ್ತೀನ್ ನೊಂದಿಗೆ ಏಕತೆಯನ್ನು ಪ್ರದರ್ಶಿಸಿತ್ತು. ಈ ಹಿನ್ನೆಲೆಯಲ್ಲಿ ಯೂನಿಯನ್ ವಿರುದ್ಧ ದಾವೆಯನ್ನು ದಾಖಲಿಸಿದ ಬಳಿಕ ಸ್ಟಾರ್ ಬಕ್ಸ್ ಗೆ ಬಿಸಿ ತಟ್ಟಲು ಆರಂಭವಾಗಿತ್ತು.
ಈ ಪೋಸ್ಟನ್ನು 40 ನಿಮಿಷಗಳಲ್ಲಿ ಅಳಿಸಲಾಗಿತ್ತಾದರೂ ಫೆಲೆಸ್ತೀನಿಗಳನ್ನು ಬೆಂಬಲಿಸಿ ಮತ್ತು ಇಸ್ರೇಲ್ ಖಂಡಿಸಿ ಸ್ಟಾರ್ ಬಕ್ಸ್ ವರ್ಕರ್ಸ್ ಯುನೈಟೆಡ್ ನ ಸ್ಥಳೀಯ ಶಾಖೆಗಳಿಂದ ಅದರ ಮರುಪೋಸ್ಟ್ ಗಳು ಈಗಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇಸ್ರೇಲ್-ಹಮಾಸ್ ಯುದ್ಧದ ಬಗ್ಗೆ ಯಾವುದೇ ಅಧಿಕೃತ ನಿಲುವನ್ನು ತಾನು ಹೊಂದಿಲ್ಲ ಎಂದು ಕಂಪನಿಯು ಹೇಳಿದೆ.
ಯೂನಿಯನ್ ಕಂಪನಿಯ ಹೆಸರು ಮತ್ತು ಲಾಂಛನವನ್ನು ಬಳಸುವುದನ್ನು ತಡೆಯಲು ಸ್ಟಾರ್ ಬಕ್ಸ್ ಅದರ ವಿರುದ್ಧ ಅ.18ರಂದು ಮೊಕದ್ದಮೆಯನ್ನು ದಾಖಲಿಸಿತ್ತು. ಆದರೆ ಸ್ಟಾರ್ ಬಕ್ಸ್ ವರ್ಕರ್ಸ್ ಯುನೈಟೆಡ್ X ನಲ್ಲಿಯ ತನ್ನ ಪೇಜಿನಲ್ಲಿ ತಾನು ಯೂನಿಯನ್ ಎಂದು ಸ್ಪಷ್ಟವಾಗಿ ಗುರುತಿಸಿಕೊಂಡಿರುವುದಾಗಿ ವಾದಿಸಿದೆ.
ಕಂಪನಿಯು ಯೂನಿಯನ್ ವಿರುದ್ಧ ತನ್ನ ಅಭಿಯಾನವನ್ನು ಉತ್ತೇಜಿಸಲು ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ದುರಂತವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ವರ್ಕರ್ಸ್ ಯುನೈಟೆಡ್ ನ ಅಧ್ಯಕ್ಷೆ ಲಿನ್ ಫಾಕ್ಸ್ ಅವರು ಸ್ಟಾರ್ ಬಕ್ಸ್ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಸ್ಟಾರ್ ಬಕ್ಸ್ ವರ್ಕರ್ಸ್ ಯುನೈಟೆಡ್ ಖಾತೆಯಿಂದ ಫೆಲೆಸ್ತೀನ್ ಪರ ಪೋಸ್ಟ್ ಗಳು ಇಸ್ರೇಲ್ ಬೆಂಬಲಿಗರನ್ನೂ ಕೆರಳಿಸಿವೆ. ಫ್ಲೋರಿಡಾದ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಸೆನೆಟರ್ ರಿಕ್ ಸ್ಕಾಟ್ ಅವರು ಸ್ಟಾರ್ ಬಕ್ಸ್ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.