ಕಾಸರಗೋಡು: ಮತದಾನ ಮಾಡುವುದು ಬಲುದೊಡ್ಡ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬರು ಮತದಾನದ ಹಕ್ಕನ್ನು ಸೂಕ್ತರೀತಿಯಲ್ಲಿ ಚಲಾಯಿಸಿ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ತಿಳಿಸಿದ್ದಾರೆ.
ಅವರು ಇ.ಕೆ.ನಾಯನಾರ್ ಸ್ಮಾರಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಚುನಾವಣಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಮತದಾನ ದಿನಾಚರಣೆಯ ತ್ರಿಕರಿಪುರ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ.90ಕ್ಕಿಂತ ಹೆಚ್ಚು ಮತದಾನ ಪ್ರಮಾಣ ಹೆಚ್ಚಿಸಲು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆಯಿದೆ. ಸ್ವೀಪ್ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ) ಜಿಲ್ಲಾ ನೋಡಲ್ ಅಧಿಕಾರಿ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಸಊಫಿಯಾನ್ ಅಹಮದ್ ರಾಷ್ಟ್ರೀಯಮತದಾನ ದಿನದ ಪ್ರತಿಜ್ಞಾವಿಧಿ ಬೋಧಿಸಿದರು. ಮತ ಯಾನದ ಅಂಗವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಬಹುಮಾನ ವಿತರಿಸಿದರು.
ಜಿಲ್ಲೆಯ ಐದು ಕ್ಷೇತ್ರಗಳ ಬೂತ್ ಮಟ್ಟದ ಉತ್ತಮ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಸನ್ಮಾನಿಸಿದರು. ಮತದಾರರ ಅಂತಿಮ ಪಟ್ಟಿಯ ಪ್ರತಿಯನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಹಸ್ತಾಂತರಿಸಿದರು. ಚಲನಚಿತ್ರ ನಟರೂ ಆಗಿರುವ ಡಿವೈಎಸ್ಪಿ ಸಿ.ಬಿಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಚುನಾವಣಾ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಕೆ.ಅಜೇಶ್, ಹೊಸದುರ್ಗ ತಹಸೀಲ್ದಾರ್ ಎಂ.ಮಾಯಾ, ತ್ರಿಕರಿಪುರ ಉತ್ತರ ಗ್ರಾಮಾಧಿಕಾರಿ ಟಿ.ವಿ.ಸಂತೋಷ್ ಉಪಸ್ಥಿತರಿದ್ದರು. ಪಾಲಿಟೆಕ್ನಿಕ್ ಪ್ರಾಚಾರ್ಯೆ ಭಾಗ್ಯಶ್ರೀದೇವಿ ಸ್ವಾಗತಿಸಿದರು. ಚುನಾವಣಾ ಸಾಕ್ಷರತಾ ಸಂಯೋಜಕ ಕೆ.ವಿ.ಶ್ರೀಜೇಶ್ ವಂದಿಸಿದರು. ಕಾರ್ಯಕ್ರಮದ ಅಮಗವಾಗಿ ಉಮೇಶ್ ಚೆರುವತ್ತೂರು ಅವರ ಜಾದೂ ಪ್ರದಶ್ನ ಆಯೋಜಿಸಲಾಗಿತ್ತು.