ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾರ್ಮಿಕರಿಗೆ ಇನ್ನು ಮುಂದೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮೂಲಕವೇ ಹಣ ಪಾವತಿಯಾಗಲಿದೆ.
ನರೇಗಾ ಕಾರ್ಮಿಕರ ಜಾಬ್ ಕಾರ್ಡ್ ವಿವರಗಳನ್ನು ಅವರ ಆಧಾರ್ ಸಂಖ್ಯೆ ಜತೆ ಜೋಡಿಸುವ ಮೂಲಕ ಎಬಿಪಿಎಸ್ ಜಾರಿಗೆ ನಿಗದಿಪಡಿಸಿದ್ದ ಡಿಸೆಂಬರ್ 31ರ ಗಡುವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯ ವಿಸ್ತರಿಸಿಲ್ಲ.
ಕೇಂದ್ರ ಸರ್ಕಾರ ಈ ಕ್ರಮವನ್ನು ಕಾಂಗ್ರೆಸ್ ಟೀಕಿಸಿದ್ದು, 'ದೇಶದ ಕೋಟ್ಯಂತರ ಬಡ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂಲಕ ಹೊಸ ವರ್ಷಕ್ಕೆ ಅತ್ಯಂತ ಕೆಟ್ಟ ಉಡುಗೊರೆ ನೀಡಿದ್ದಾರೆ' ಎಂದು ದೂರಿದೆ.
ದೇಶದ ದುರ್ಬಲ ವರ್ಗದವರಿಗೆ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ನಿರಾಕರಿಸಲು ಆಧಾರ್ ವ್ಯವಸ್ಥೆ ಸೇರಿದಂತೆ ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸುವುದನ್ನು ಮೋದಿ ಸರ್ಕಾರ ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ.
ಈ ಮೂಲಕ 'ಮೋದಿ ಸರ್ಕಾರವು ತಂತ್ರಜ್ಞಾನದ ವಿನಾಶಕಾರಿ ಪ್ರಯೋಗಗಳನ್ನು ಮುಂದುವರಿಸುತ್ತಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ.
'ದೇಶದಲ್ಲಿ ಒಟ್ಟು 25.69 ಕೋಟಿ ನರೇಗಾ ಕಾರ್ಮಿಕರು ಇದ್ದಾರೆ. ಇವರಲ್ಲಿ 14.33 ಕೋಟಿ ಸಕ್ರಿಯ ಕಾರ್ಮಿಕರು. ಡಿಸೆಂಬರ್ 27ರ ಅನ್ವಯ, ನೋಂದಣಿಯಾಗಿರುವ ಒಟ್ಟು ಕಾರ್ಮಿಕರಲ್ಲಿ ಶೇ 34.8 (8.9 ಕೋಟಿ) ಮತ್ತು ಶೇ 12.7 (1.8 ಕೋಟಿ) ರಷ್ಟು ಸಕ್ರಿಯ ಕಾರ್ಮಿಕರು ಎಬಿಪಿಎಸ್‌ಗೆ ಅನರ್ಹರಾಗಿದ್ದಾರೆ. ಇವರ ಸಮಸ್ಯೆಗಳನ್ನು ಕಾರ್ಮಿಕರು, ತಜ್ಞರು ಮತ್ತು ಸಂಶೋಧಕರು ಎತ್ತಿ ತೋರಿಸಿದ್ದರೂ ಸರ್ಕಾರ ಎಬಿಪಿಎಸ್ ಜಾರಿಗೆ ಮುಂದಾಗಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನರೇಗಾಕ್ಕಾಗಿ ವಿನ್ಯಾಸಗೊಳಿಸಿರುವ ಡಿಜಿಟಲ್ ಹಾಜರಾತಿ (ಎನ್‌ಎಂಎಂಎಸ್), ಎಬಿಪಿಎಸ್, ಡ್ರೋನ್ ನಿಗಾ ಸೇರಿದಂತೆ ವಿವಿಧ ತಂತ್ರಜ್ಞಾನದ ಯೋಜನೆಗಳನ್ನು ಕೋಟ್ಯಂತರ ಭಾರತೀಯರ ಮೇಲೆ ಪ್ರಯೋಗಿಸುವ ಮುನ್ನ ಮೋದಿ ಸರ್ಕಾರ ಯಾವುದೇ ಸಮಾಲೋಚನೆಗಳನ್ನು ನಡೆಸಿಲ್ಲ ಎಂದು ದೂರಿದ್ದಾರೆ.
ಎಬಿಪಿಎಸ್‌ಗೆ ಅನರ್ಹರಾದವರ ಜಾಬ್ ಕಾರ್ಡ್‌ಗಳನ್ನು ರದ್ದುಪಡಿಸಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೇಳಿಕೆಯನ್ನು ತಳ್ಳಿ ಹಾಕಿರುವ ಅವರು, 2022ರ ಏಪ್ರಿಲ್‌ನಿಂದ 7.6 ಕೋಟಿ ಕಾರ್ಮಿಕರ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ದೂರಿದ್ದಾರೆ.