ಮೆಲ್ಬರ್ನ್: ಆಸ್ಟ್ರೇಲಿಯಾದ ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ವಿಕ್ಟೋರಿಯಾದ ರಾಜ್ಯದ ಫಿಲಿಪ್ ದ್ವೀಪದಲ್ಲಿ ಬುಧವಾರ ಈ ಘಟನೆ ನಡೆದಿದೆ.
ಸುಮಾರು 20 ವರ್ಷಗಳಲ್ಲಿ ಇದು ವಿಕ್ಟೋರಿಯಾ ಸಮುದ್ರದಲ್ಲಿ ನಡೆದ ಅತ್ಯಂತ ಭೀಕರ ದುರಂತವಾಗಿದೆ ಎಂದು ಅಲ್ಲಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನ 3.30 ರ ಸುಮಾರಿಗೆ ನ್ಯೂಹೇವನ್ ಬಳಿ ನಾಲ್ಕು ಜನರು ನೀರಿನಲ್ಲಿ ಒದ್ದಾಡುತ್ತಿರುವುದನ್ನು ಕಂಡು ತುರ್ತು ಸೇವಾ ಸಿಬ್ಬಂದಿ ರಕ್ಷಿಸಲು ಪ್ರಯತ್ನಿಸಿದ್ದರು, ಆದರೆ ಸಾಧ್ಯವಾಗಲಿಲ್ಲ. ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.
ಘಟನೆ ಕುರಿತು ಕ್ಯಾನ್‌ಬೆರಾದಲ್ಲಿರುವ ಭಾರತೀಯ ಹೈಕಮಿಷನ್ ಗುರುವಾರ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.
'ಆಸ್ಟ್ರೇಲಿಯಾದಲ್ಲಿ ಹೃದಯವಿದ್ರಾವಕ ದುರಂತ: ವಿಕ್ಟೋರಿಯಾದ ಫಿಲಿಪ್ ದ್ವೀಪದಲ್ಲಿ ಮುಳುಗಿದ ಘಟನೆಯಲ್ಲಿ 4 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ. cgimelbourne ತಂಡವು ಎಲ್ಲಾ ಅಗತ್ಯ ಸಹಾಯಕ್ಕಾಗಿ ಮೃತರ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಜೈಶಂಕರ್ ಅವರನ್ನು ಟ್ಯಾಗ್ ಮಾಡಿ ಹೈಕಮಿಷನ್ ಪೋಸ್ಟ್ ಮಾಡಿದೆ.