ಕಾಸರಗೋಡು: ಪ್ರಧ್ಯಾಪಕನ ಕೈಕಡಿದು ತುಂಡರಿಸಿದ ಪ್ರಕರಣದ ತನಿಖೆಯನ್ನು ಎನ್‍ಐಎ ಅಧಿಕಾರಿಗಳು ಕಾಸರಗೋಡಿಗೆ ವಿಸ್ತರಿಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಎನ್‍ಐಎ ಅಧಿಕಾರಿಗಳು ಕಾಸರಗೋಡಿಗೆ ಭೇಟಿ ನೀಡಿದ್ದಾರೆ.
ಪ್ರಾಧ್ಯಾಪಕ ಟಿ.ಜೆ ಜೋಸೆಫ್ ಅವರ ಕೈ ಕಡಿದ ಪ್ರಕರಣದ ಪ್ರಮುಖ ಆರೋಪಿ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‍ಐ)ಕಾರ್ಯಕರ್ತ, ಎರ್ನಾಕುಳಂ ಪೆರುಂಬಾವೂರು ಅಶವನ್ನೂರ್ ಮಟ್ಟಾಶ್ಯೇರಿ ನಿವಾಸಿ ಸವಾದ್‍ನ ಕುರಿತಾದ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಎನ್‍ಐಎ ಅಧಿಕಾರಿಗಳ ತಂಡ ಕಾಸರಗೋಡು ತಲುಪಿದೆ. ಸವಾದ್ ಎಂಟು ವರ್ಷದ ಹಿಂದೆ ನಕಲಿ ಹೆಸರು ಹಾಗೂ ವಿಳಾಸ ನೀಡಿ ಮಂಜೇಶ್ವರದ ಯುವತಿಯನ್ನು ವಿವಾಹಿತನಾಗಿದ್ದು, ಈ ಸಂಬಂಧದಲ್ಲಿ ಇಬ್ಬರು ಮಕ್ಕಳನ್ನೂ ಹೊಂದಿದ್ದಾನೆ. ಈತನ ಪತ್ನಿ ಮನೆಯವರಿಂದಲೂ ಎನ್‍ಐಎ ತಂಡ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ಆರೋಪಿ ಸವಾದ್‍ನನ್ನು ಗುರುತು ಪತ್ತೆಹಚ್ಚುವ ಪೆರೇಡ್ ನಡೆಸಲು ಅನುಮತಿ ಕೋರಿ ಎನ್‍ಐಎ ಅಧಿಕಾರಿಗಳು ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಈತನಿಂದ ಎರಡು ಮೊಬೈಲ್, ಸಿಮ್‍ಕಾರ್ಡ್ ಸೇರಿದಂತೆ ವಿವಿಧ ದಾಖಲೆಪತ್ರಗಳನ್ನೂ ಎನ್‍ಐಎ ವಶಪಡಿಸಿಕೊಂಡಿದೆ. ಕಳೆದ 13ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸವಾದ್ ಪತ್ತೆಗಾಗಿ ಎನ್‍ಐಎ 10ಲಕ್ಷ ರೂ. ಬಹುಮಾನವನ್ನೂ ಘೋಷಿಸಿತ್ತು. ಸವಾದ್ ತನ್ನ ಹೆಸರನ್ನು ಶಾಜಹಾನ್ ಎಂಬುದಾಗಿ ಬದಲಾಯಿಸಿಕೊಂಡು ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದನು. ಈ ಮಧ್ಯೆ ಅತ್ಯಂತ ಸಾಹಸಕರ ರಈತಿಯಲ್ಲಿ ಎನ್‍ಐಎ ಈತನನ್ನು ಬಲೆಗೆ ಕೆಡವಿದೆ. 2010ರಲ್ಲಿ ಪ್ರಾಧ್ಯಾಪಕ ಪ್ರೊ. ಟಿ.ಜೆ ಜೋಸೆಫ್ ಕೈ ಕಡಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಗುರುತಿಸಿಕೊಂಡಿದ್ದನು.