ಮಂಜೇಶ್ವರ: ಹವಾಮಾನ ವೈಪರೀತ್ಯವು ಕೃಷಿ ವಲಯವನ್ನು ವ್ಯಾಪಕವಾಗಿ ಬಾಧಿಸಿದ್ದು, ಮುಖ್ಯವಾಗಿ ಭತ್ತದ ಕೃಷಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ತಿಂಗಳ ವ್ಯತ್ಯಾಸವಿಲ್ಲದೆ ಆಗಾಗ ಸುರಿಯುತ್ತಿರುವ ಮಳೆಯ ಜೊತೆಗೆ ಕಾರ್ಮಿಕರ ಸಮಸ್ಯೆ ತೀವ್ರವಾಗಿದೆ.
ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಬೆಳೆಗೆ ಮಹಿಳೆಯರು ಸಿಗುವುದಿಲ್ಲವೆಂದು ಕೃಷಿಕರು ಹೇಳುತಿದ್ದಾರೆ. ಒಂದು ವರ್ಷದಲ್ಲಿ ನೂರು ದಿನದ ಉದ್ಯೋಗ ಖಾತರಿ ಯೋಜನೆಯ ಕೆಲಸ ಲಭಿಸುತ್ತದೆ. ಆದರೆ ವರ್ಷದ ಮಧ್ಯೆ ಭತ್ತದ ಕೃಷಿಗೂ ಎನ್ ಆರ್ ಜಿ ಕಾರ್ಮಿಕರನ್ನು ಬಳಸಲು ಅಧಿಕಾರಿಗಳು ಅವಕಾಶ ಮಾಡಿಕೊಡಬೇಕೆಂದು ಕೃಷಿಕರು ದಶಕಗಳಿಂದ ಬೇಡಿಕೆ ಇಡುತ್ತಿದ್ದರೂ ಅಧಿಕೃತರು ಕ್ರಮಕೈಗೊಳ್ಳುತ್ತಿಲ್ಲ.
ಸೂಕ್ತ ಸಮಯದಲ್ಲಿ ಕೃಷಿ ಕೊಯ್ಲು ನಡೆಸದ ಹಿನ್ನಲೆಯಲ್ಲಿ ಜಿಲ್ಲೆಯ ಮಂಜೇಶ್ವರ ಕನಿಲ, ಬದಿಯಡ್ಕ ಸಮೀಪದ ಕುಂಬ್ಡಾಜೆ ಏತಡ್ಕ, ನೀರ್ಚಾಲು ಮಾನ್ಯ ಬಯಲು ಮೊದಲಾದೆಡೆ ಗದ್ದೆಗಳಲ್ಲಿ ಕಳೆದ ಕೆಲವು ದಿವನಗಳಿಂದ ಸುರಿದ ಮಳೆ ಅವಾಂತರಕ್ಕೆ ರೈತರು ತತ್ತರಿಸಿದ್ದು ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಅನಿರೀಕ್ಷಿತ ಮಳೆಯಿಂದ ಮಣ್ಣು ಪಾಲಾಗಿದೆ. ಎಕರೆಗೆ 40 ಚೀಲ ನಿರೀಕ್ಷೆ ಮಾಡಿದ್ದ ರೈತರಿಗೆ ನಿರಾಸೆ ಕಾರ್ಮೋಡವಾಗಿದ್ದು, ಕಟಾವಿಗೆ ಬಂದಿದ್ದ ಭತ್ತ ಧರಾಶಾಯಿಯಾಗಿ ಕಣ್ಣೀರು ಬರಿಸಿದೆ. ಕೆಲವೇ ದಿನಗಳಲ್ಲಿ ಧರೆಗೆ ಉರುಳಿದ ಭತ್ತ ಮೊಳಕೆಯೊಡಲಿದೆ. ಮಳೆಯಿಂದಾಗಿ ಪ್ರದೇಶದ ಭತ್ತ ಮಣ್ಣು ಪಾಲಾಗಿದೆ. ಒಟ್ಟಾರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬುದು ರೈತರ ಸಂಕಟವಾಗಿದೆ. ಇನ್ನು ಅಧಿಕಾರಿಗಳೇ ಹಾನಿ ಅಂದಾಜಿಸಿ ಸೂಕ್ತ ಪರಿಹಾರ ನೀಡಿ, ರೈತನ ಬದುಕನ್ನು ಹಸನಾಗಿಸಬೇಕಿದೆ.
ಮಂಜೇಶ್ವರ, ಕಾಸರಗೋಡು ತಾಲೂಕು ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಬೇಸಿಗೆ ಬಿಸಿಲಿಗೆ ಜನ ಹೈರಾಣಾಗಿದ್ದು ಕಳೆದೆರಡು ದಿನಗಳಿಂದ ರಾತ್ರಿ ಸುರಿದ ಮಳೆ ತಂಪೆರೆದಿದೆ.
ಅಡಕೆ ತೋಟ ಸಹಿತ ವಿವಿಧ ತೋಟದ ಬೆಳೆಗಳು, ಭತ್ತದ ಕೃಷಿಗಳಿಗೆ ಅಕಾಲಿಕ ಮಳೆ ಭಾರೀ ನಷ್ಟಕ್ಕೆ ಕಾರಣವಾಗಿದೆ.