2023 ದೇಶದಾದ್ಯಂತ ಜನರನ್ನು '5ಜಿ' ಅಲೆಯಲ್ಲಿ ತೇಲಿಸಿದ ವರ್ಷವಾಗಿತ್ತು. ನಗರ ಪ್ರದೇಶದ ಜನರಿಗೆ 5ಜಿ ಬೇಗ ಸಿಕ್ಕಿದ್ದರೆ, ಪಟ್ಟಣ ಪ್ರದೇಶದಲ್ಲಿರುವವರಿಗೆ ಈಗಷ್ಟೇ 5ಜಿ ಸೌಲಭ್ಯ ಸಿಕ್ಕಿದೆ. ಆದರೆ, ಇನ್ನೂ ಸುಮಾರು 40ರಷ್ಟು ಪ್ರದೇಶಗಳಿಗೆ ಪ್ರಾಥಮಿಕ ಇಂಟರ್‌ನೆಟ್ ಸೌಲಭ್ಯವೂ, ಮೊಬೈಲ್ ಸಂಪರ್ಕವೂ ಸಿಕ್ಕಿಲ್ಲ.
ಈಗಾಗಲೇ ಸರ್ಕಾರ ಟೆಲಿಕಮ್ಯೂನಿಕೇಶನ್ಸ್ ಮಸೂದೆ 2023ಅನ್ನು ಕಾನೂನಾಗಿ ರೂಪಿಸಿ, ಸ್ಯಾಟಲೈಟ್ ತರಂಗಾಂತರಗಳನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಪೂರಕವಾಗಿ ಈಗಾಗಲೇ ಕೆಲವು ಕಂಪನಿಗಳು ಇಂಟರ್‌ನೆಟ್ ಸೇವೆಯನ್ನು ಒದಗಿಸಲು ಅನುಮತಿ ಪಡೆದಿದ್ದರೆ, ಇಸ್ರೊದ ಅಂಗಸಂಸ್ಥೆ 'ಇನ್‌ಸ್ಟೆನ್ಸ್'ನಿಂದ ತರಂಗಾಂತರ ನಿಯೋಜನೆಗಾಗಿ ಅರ್ಜಿ ಸಲ್ಲಿಸಿಕೊಂಡು, ಕಾದು ಕುಳಿತಿವೆ. ಒನ್ವೆಬ್ ಸಂಸ್ಥೆಯ ಬೆಂಬಲದೊಂದಿಗೆ ಭಾರ್ತಿ ಗ್ರೂಪ್, ರಿಲಾಯನ್ಸ್‌ನ ಜಿಯೋ ಸ್ಯಾಟಲೈಟ್ ಕಮ್ಯೂನಿಕೇಶನ್ಸ್ ಲಿ. ಮತ್ತು ಉದ್ಯಮಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಂಸ್ಥೆಗಳು ಭಾರತದಲ್ಲಿ ಸ್ಯಾಟಲೈಟ್ ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸಲು ತುದಿಗಾಲಲ್ಲಿ ನಿಂತಿವೆ.
ಹೇಗೆ ಕೆಲಸ ಮಾಡುತ್ತದೆ ಈ ಇಂಟರ್‌ನೆಟ್?
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆಗಳಲ್ಲಿ ಹೆಸರೇ ಹೇಳುವ ಹಾಗೆ ಸ್ಯಾಟಲೈಟ್‌ಗಳನ್ನು ಬಳಸಿ ಇಂಟರ್‌ನೆಟ್ ಸೇವೆಯನ್ನು ಒದಗಿಸಲಾಗುತ್ತದೆ. ಸಾಮಾನ್ಯವಾಗಿ 'ಲೋ ಅರ್ಥ್ ಆರ್ಬಿಟ್' (ಲಿಯೋ) ಮತ್ತು 'ಮೀಡಿಯಮ್ ಅರ್ಥ್ ಆರ್ಬಿಟ್' (ಮಿಯೋ) ಸ್ಯಾಟಲೈಟ್‌ಗಳನ್ನು ಬಳಸಲಾಗುತ್ತದೆ. ಲೋ ಅರ್ಥ್ ಆರ್ಬಿಟ್ ಸ್ಯಾಟಲೈಟ್‌ಗಳು ಭೂಮಿಯಿಂದ 250ರಿಂದ 2000 ಕಿ.ಮೀ. ದೂರದಲ್ಲಿ ಸ್ಯಾಟಲೈಟ್‌ಗಳಿರುತ್ತವೆ. ಇನ್ನು ಮಿಯೋ ಸ್ಯಾಟಲೈಟ್‌ಗಳು 2000 ಕಿ.ಮೀ. ಇಂದ 35,786 ಕಿ.ಮೀ. ದೂರದಲ್ಲಿ ಇರುತ್ತವೆ. ಸ್ಟಾರ್‌ಲಿಂಕ್ ಮತ್ತು ಒನ್ವೆಬ್ ಲಿಯೋ ಸ್ಯಾಟಲೈಟ್‌ಗಳನ್ನು ಬಳಸುತ್ತವೆ. ಸ್ಟಾರ್‌ಲಿಂಕ್ ಸುಮಾರು ಐದು ಸಾವಿರ ಸ್ಯಾಟಲೈಟ್‌ಗಳನ್ನು ಈಗಾಗಲೇ ಈ ಕಕ್ಷೆಯಲ್ಲಿವೆ. ಇನ್ನು ಒನ್ವೆಬ್ 630 ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಿದೆ. ಆದರೆ, ಜಿಯೋ ಮಿಯೋ ಸ್ಯಾಟಲೈಟ್ ಬಳಕೆ ಮಾಡಲು ನಿರ್ಧಾರ ಮಾಡಿದೆ. ಲಿಯೋ ಅನುಕೂಲವೆಂದರೆ, ಇದರ ಲ್ಯಾಟೆನ್ಸಿ ಕಡಿಮೆ ಇರುತ್ತದೆ. ಎಂದರೆ, ಡೇಟಾ ವರ್ಗಾವಣೆಗೆ ತೆಗೆದುಕೊಳ್ಳುವ ಸಮಯದ ಅವಧಿ ಕಡಿಮೆ ಇರುತ್ತದೆ. ಆದರೆ, ಮಿಯೋದಲ್ಲಿ ಹೆಚ್ಚು ದೂರಕ್ಕೆ ಡೇಟಾ ಚಲಿಸಬೇಕಿರುವುದರಿಂದ ಲ್ಯಾಟೆನ್ಸಿ ಹೆಚ್ಚಾಗುತ್ತದೆ. ಇದರಿಂದಾಗಿ, ಯಾವುದಾದರೂ ಒಂದು ಲೈವ್ ಕಾರ್ಯಕ್ರಮವನ್ನು ನಾವು ಇಂಟರ್‌ನೆಟ್ ಬಳಸಿ ವೀಕ್ಷಿಸುತ್ತಿದ್ದೇವೆ ಎಂದಾದರೆ, ಆಗ ಮಿಯೋದಲ್ಲಿ ಕೆಲವು ಸೆಕೆಂಡುಗಳು ತಡವಾಗಿಯೂ, ಲಿಯೋದಲ್ಲಿ ಕೆಲವು ಸೆಕೆಂಡುಗಳು ಬೇಗವೂ ನಾವು ನೋಡಬಹುದು. ಉದಾಹರಣೆಗೆ, ಕ್ರಿಕೆಟ್ ನೋಡುತ್ತಿರುವಾಗ ಲಿಯೋ ಸ್ಯಾಟಲೈಟ್‌ಗಳು ಚೆಂಡು ಬೌಂಡರಿಗೆ ಹೋಗಿದ್ದನ್ನು ತೋರಿಸುತ್ತಿದ್ದರೆ, ಮಿಯೋ ಸ್ಯಾಟಲೈಟ್‌ಗಳು ಇನ್ನೂ ಬೌಲರ್ ಚೆಂಡು ಎಸೆಯುತ್ತಿರುವುದನ್ನೇ ತೋರಿಸುತ್ತಿರಬಹುದು. ಮಿಯೋದ ಅನುಕೂಲವೆಂದರೆ, ಇದು ಹೆಚ್ಚು ಎತ್ತರದಲ್ಲಿರುವುದರಿಂದ ಕಡಿಮೆ ಸ್ಯಾಟಲೈಟ್‌ಗಳಲ್ಲಿ ಹೆಚ್ಚು ಭೂ ಪ್ರದೇಶವನ್ನು ವ್ಯಾಪಿಸುತ್ತದೆ.
ಬಳಸುವುದು ಹೇಗೆ?
ಇಂಟರ್‌ನೆಟ್ ಸೇವೆಯನ್ನು ಸ್ಯಾಟಲೈಟ್‌ಗಳಿಂದ ಬಳಸಬೇಕು ಎಂದಾದರೆ, ಅದಕ್ಕೆ ನಾವು ಪ್ರತ್ಯೇಕ ಅಯಂಟೆನಾವನ್ನು ಖರೀದಿ ಮಾಡಬೇಕಾಗುತ್ತದೆ. ಈಗ ಡಿಟಿಎಚ್ ಅನ್ನು ನಾವು ಹೇಗೆ ಬಳಸುತ್ತಿದ್ದೇವೆಯೋ ಅದೇ ರೀತಿ, ಒಂದು ಡಿಶ್ ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಈ ಡಿಶ್ ಅಥವಾ ಆಂಟೆನಾ ಸ್ಯಾಟಲೈಟ್‌ನಿಂದ ತರಂಗಾಂತರಗಳನ್ನು ಸೆರೆಹಿಡಿದು ರೌಟರ್‌ಗೆ ವರ್ಗಾವಣೆ ಮಾಡುತ್ತದೆ. ಆ ರೌಟರ್‌ನಿಂದ ವೈಫೈ ಅಥವಾ ಕೇಬಲ್ ಮೂಲಕ ನಾವು ಮೊಬೈಲ್ ಅಥವಾ ಇತರ ಸಾಧನಗಳಲ್ಲಿ ಇಂಟರ್‌ನೆಟ್ ಅನ್ನು ಬಳಸಬಹುದು. ಆದರೆ, ಸ್ಟಾರ್‌ಲಿಂಕ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ನೇರವಾಗಿ ಮೊಬೈಲ್‌ನಲ್ಲೇ ಇದನ್ನು ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದೆ.
ಅನುಕೂಲವೇನು?
ಇದರ ಅತ್ಯಂತ ಮುಖ್ಯ ಅನುಕೂಲವೆಂದರೆ, ಈಗಿರುವ ಮೊಬೈಲ್ ಟವರ್‌ಗಳ ಸೀಮಿತ
ವ್ಯಾಪ್ತಿಯನ್ನು ಮೀರಿ ಇವು ದೊಡ್ಡ ಭೂಪ್ರದೇಶಕ್ಕೆ ಇಂಟರ್‌ನೆಟ್ ಸೌಲಭ್ಯವನ್ನು ಕಲ್ಪಿಸಬಲ್ಲವು. ಇಡೀ ದೇಶದ ಯಾವುದೇ ಗುಡ್ಡಗಾಡಿನಲ್ಲಿ ಮನೆ ಇದ್ದರೂ ಕೂಡ, ಅವರು ಇಂಟರ್‌ನೆಟ್ ಅನ್ನು ಬಳಕೆ ಮಾಡಬಹುದು. ಸದ್ಯ, ಈಗಿನ ವ್ಯವಸ್ಥೆಯಲ್ಲಿ ಕುಗ್ರಾಮಗಳಲ್ಲಿ, ಜನಸಂದಣಿ ಕಡಿಮೆ ಇರುವ ಪ್ರದೇಶಗಳಲ್ಲಿ ಇಂಟರ್‌ನೆಟ್, ಮೊಬೈಲ್ ಸಂಪರ್ಕವನ್ನು ಒದಗಿಸುವುದು ಅಸಾಧ್ಯ ಎಂಬಂತಾಗಿದೆ. ಆದರೆ ಈ ಸಮಸ್ಯೆಯನ್ನು ಸ್ಯಾಟಲೈಟ್ ಇಂಟರ್‌ನೆಟ್ ನಿವಾರಿಸಲಿದೆ.
ಅಲ್ಲದೆ, ನೈಸರ್ಗಿಕ ಅಥವಾ ಇತರ ವಿಪತ್ತಿನ ಸಮಯದಲ್ಲಿ ಟವರ್ ಮೂಲಕ ಒದಗಿಸಲಾಗುವ ಇಂಟರ್‌ನೆಟ್ ಸಂಪರ್ಕ ವಿಫಲವಾಗುವುದರಿಂದ, ಸ್ಯಾಟಲೈಟ್ ಸಂವಹನ ಹೆಚ್ಚು ಉಪಯೋಗಕ್ಕೆ ಬರಲಿದೆ.
ಈಗಿರುವ ಇಂಟರ್‌ನೆಟ್‌ಗೆ ಪರ್ಯಾಯವೇ?
ಸದ್ಯದ ಪರಿಸ್ಥಿತಿಯಲ್ಲಿ, ಈಗಿರುವ ಇಂಟರ್‌ನೆಟ್, ಬ್ರಾಡ್‌ಬ್ಯಾಂಡ್ ವ್ಯವಸ್ಥೆಗೆ ಸ್ಯಾಟಲೈಟ್ ಇಂಟರ್‌ನೆಟ್ ಪ್ರತಿಸ್ಪರ್ಧೆಯನ್ನು ಒಡ್ಡುವುದಿಲ್ಲ. ಏಕೆಂದರೆ, ಇದರ ವೇಗ ಈಗಿನ ಬ್ರಾಡ್‌ಬ್ಯಾಂಡ್‌ಗೆ ಹೋಲಿಸಿದರೆ ಕಡಿಮೆಯೇ ಇರುವುದರಿಂದ ಮತ್ತು ವೆಚ್ಚವೂ ಹೆಚ್ಚಾಗಿರುವುದರಿಂದ ಕುಗ್ರಾಮಗಳು ಮತ್ತು ಸಂಪರ್ಕ ಇಲ್ಲದ ಪ್ರದೇಶಗಳಲ್ಲಿ ಬಳಸುವುದೇ ಇದರ ಪ್ರಥಮ ಆದ್ಯತೆಯಾಗಿರುತ್ತದೆ. ಅದನ್ನು ಹೊರತುಪಡಿಸಿ, ನಗರಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಈ ಸೌಲಭ್ಯವನ್ನು ಬಳಸಬಹುದಾಗಿದೆ. ಇನ್ನೂ ಒಂದು ಅನುಕೂಲವೆಂದರೆ, ವಿಮಾನಗಳಲ್ಲಿ ಇದರ ಬಳಕೆ ಮಾಡಿಕೊಂಡು ಇಂಟರ್‌ನೆಟ್ ಸೌಲಭ್ಯವನ್ನು ಒದಗಿಸಬಹುದಾಗಿದೆ.