ಅಯೋಧ್ಯೆ: ಜನವರಿ 22ರಂದು ನಡೆಯಲಿರುವ ರಾಮಮಂದಿರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದ್ದು, ಅದರಲ್ಲಿ ಮಂದಿರ ಮತ್ತು ಬಾಲರಾಮನ ಚಿತ್ರಗಳನ್ನು ಮುಖ್ಯವಾಗಿ ಅಚ್ಚುಮಾಡಲಾಗಿದೆ. ಮಂದಿರ ನಿರ್ಮಾಣ ಪ್ರಕ್ರಿಯೆ ಕುರಿತ ಮಾಹಿತಿಯನ್ನೂ ಪತ್ರದಲ್ಲಿ ಒದಗಿಸಲಾಗಿದೆ.
ಆಮಂತ್ರಣದಲ್ಲಿ ಒಟ್ಟು ಎರಡು ಪತ್ರಗಳು ಮತ್ತು ಒಂದು ಕಿರುಹೊತ್ತಿಗೆಯನ್ನು ಇದೆ. ಪತ್ರಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಚ್ಚು ಮಾಡಲಾಗಿದೆ. ಕೆಂಪು ಬಣ್ಣದ ಪತ್ರಗಳ ಮೇಲೆ ಚಿನ್ನದ ಬಣ್ಣದಿಂದ ಅಕ್ಷರಗಳನ್ನು ಮೂಡಿಸಲಾಗಿದೆ. ರಾಮ ಜನ್ಮಭೂಮಿ ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಮುಖ ವ್ಯಕ್ತಿಗಳ ಕಿರುಪರಿಚಯವನ್ನು ಕಿರುಹೊತ್ತಿಗೆಯಲ್ಲಿ ನೀಡಲಾಗಿದೆ.
ಮೊದಲ ಪತ್ರಕ್ಕೆ 'ಕಾರ್ಯಕ್ರಮ ವಿಶೇಷ' (ಸೆರಮನಿ ಸ್ಪೆಷಲ್) ಎಂದು ಹೆಸರು ನೀಡಲಾಗಿದೆ. ಇದರಲ್ಲಿ ರಾಮಮಂದಿರದ ಚಿತ್ರವನ್ನು ಅಚ್ಚು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯರ ವಿವರ ಮತ್ತು ಕಾರ್ಯಕ್ರಮದ ವಿವರವನ್ನೂ ನಮೂದಿಸಲಾಗಿದೆ.
ಎರಡನೇ ಪತ್ರಕ್ಕೆ 'ಅಪೂರ್ವ ಅನಾಧಿಕ್ ನಿಮಂತ್ರಣ್' ಎಂಬ ಶೀರ್ಷಿಕೆ ನೀಡಲಾಗಿದೆ. ಅದರಲ್ಲಿ ಬಾಲರಾಮನ ಚಿತ್ರ ಮತ್ತು ಮಂದಿರದ ಛಾಯಾರೂಪ ಚಿತ್ರಿಸಲಾಗಿದೆ. ಇದರ ಮತ್ತೊಂದು ಭಾಗದಲ್ಲಿ ಸಮಾರಂಭದ ದಿನಾಂಕ ಮತ್ತು ಇತರ ವಿವರಗಳನ್ನು ನೀಡಲಾಗಿದೆ.
ಆಮಂತ್ರಿತರ ಪಟ್ಟಿಯನ್ನು ಮಂದಿರ ಟ್ರಸ್ಟ್ ತಯಾರಿಸಿದೆ. ಸುಮಾರು 7,000 ಅತಿಥಿಗಳನ್ನು ಆಮಂತ್ರಿಸಲು ಟ್ರಸ್ಟ್ ತೀರ್ಮಾನಿಸಿದೆ. ಕ್ರಿಕೆಟ್ ಆಟಗಾರರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೋಹ್ಲಿ, ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಆಮಂತ್ರಿತರ ಪಟ್ಟಿಯಲ್ಲಿರುವ ಪ್ರಮುಖರು ಎಂದು ಮೂಲಗಳು ತಿಳಿಸಿವೆ.
ಅತಿಥಿಗಳ ಪಟ್ಟಿಯಲ್ಲಿ ಸಾಧುಗಳು, ಸಂತರು ಮತ್ತು ಕೆಲ ವಿದೇಶಿ ಆಮಂತ್ರಿತರೂ ಸೇರಿದ್ದಾರೆ. ಆಮಂತ್ರಣ ಪತ್ರಗಳನ್ನು ಈಗಾಗಲೇ ಅತಿಥಿಗಳಿಗೆ ನೀಡಲಾಗುತ್ತಿದೆ.