ಕಾಸರಗೋಡು: ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳ ನಿರಂತರ ಕಾರ್ಯಾಚರಣೆ ನಡುವೆಯೂ ಅನಧಿಕೃತ ಮರಳು ಸಂಗ್ರಹ ಅವ್ಯಾಹತವಾಗಿ ನಡೆಸುತ್ತಿದ್ದು, ಕುಂಬಳೆಯ ವಿವಿಧೆಡೆ ಪೊಲೀಸ್ ಕಾರ್ಯಾಚರಣೆ ಮತ್ತೆ ಚುರುಕುಗೊಳಿಸಿದ್ದಾರೆ.
ಕುಂಬಳೆಯ ಪಾಚಾಣಿ, ಉಳುವಾರು, ಮಾಕೂರು ಎಂಬಲ್ಲಿ ಮರಳುಸಂಗ್ರಹ ಅಡ್ಡೆಗೆ ದಾಳಿ ನಡೆಸಿರುವ ಪೊಲೀಸರು ಹಲವು ದೋಣಿಗಳನ್ನು ಪತ್ತೆಹಚ್ಚಿ, ನಾಶಗೊಳಿಸಿದ್ದಾರೆ. ಕುಂಬಳೆ ಠಾಣೆ ಎಸ್.ಐ ವಿ.ಕೆ ಅನೀಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಅನಧಿಕೃತ ಮರಳು ಅಡ್ಡಗಳನ್ನು ನಿರ್ಮಿಸಿಕೊಂಡು, ಇಲ್ಲಿಂದ ವ್ಯಾಪಕವಾಗಿ ಮರಳು ಕಳ್ಳಸಾಗಾಟ ನಡೆಸುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ನೀರಿನಲ್ಲಿ ಮುಳುಗಿಸಿಟ್ಟಿದ್ದ ಆರು ದೋಣಿಗಳನ್ನು ವಶಪಡಿಸಿ, ನಂತರ ಇವುಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಮರಳು ಸಾಗಾಟದ ಬೆರಳೆಣಿಕೆಯ ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿದ್ದು, ಕುಂಬಳೆ, ಮೊಗ್ರಾಲ್‍ಪುತ್ತೂರು, ಶಿರಿಯ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಅನಧಿಕೃತ ಮರಳುಸಾಗಾಟ ನಡೆಯುತ್ತಿರುವುದಾಗಿ ನಾಗರಿಕರು ದೂರಿದ್ದಾರೆ.