ತ್ರಿಶೂರ್: ಕರುವನ್ನೂರ್ ಸಹಕಾರಿ ಬ್ಯಾಂಕ್‍ನಲ್ಲಿ ಹೂಡಿಕೆದಾರರೊಬ್ಬರು ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿದ್ದು, ತಮ್ಮ ಜೀವನ ಅಸ್ತವ್ಯಸ್ತವಾಗಿದೆ ಎಂದು ಕಾರಣ ನೀಡಿರುವರು.
ತ್ರಿಶೂರ್‍ನ ಮಾಪ್ರಾಣಾಂ ನಿವಾಸಿ 53 ವರ್ಷದ ಜೋಶಿ, ಚಿಕಿತ್ಸೆ ಮತ್ತು ಜೀವನ ವೆಚ್ಚವನ್ನು ಭರಿಸಲು ಸಾಧ್ಯವಾಗದ ಕಾರಣ ದಯಾಮರಣಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್ ಮತ್ತು ಸರ್ಕಾರಕ್ಕೆ ಅರ್ಜಿ ಸಲ್ಲಿಸಿರುವÀರು. ಜನವರಿ 30ಕ್ಕೆ ಜೀವನ ಅಂತ್ಯಗೊಳಿಸಲು ಅನುಮತಿ ನೀಡಬೇಕು ಎಂಬುದು ಅವರ ಆಗ್ರಹ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದ್ದು, ಕುಟುಂಬದ ಸಂಪೂರ್ಣ ಉಳಿತಾಯವನ್ನು ಕರುವನ್ನೂರು ಬ್ಯಾಂಕ್ ನಲ್ಲಿ ಠೇವಣಿ ಇಡಲಾಗಿತ್ತು. ಹಣ ಸಿಗದಿದ್ದಾಗ ಹಲವೆಡೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾನು 20 ವರ್ಷಗಳಲ್ಲಿ 21 ಶಸ್ತ್ರಚಿಕಿತ್ಸೆಗೆ ಒಳಗಾಗಿರುವೆ ಎಂದು ಹೇಳಿಕೊಂಡಿದ್ದಾರೆ. ಕುಟುಂಬದ ಖರ್ಚು, ಮಕ್ಕಳ ಶಿಕ್ಷಣ ಮತ್ತು ಅವರ ಚಿಕಿತ್ಸೆ ಬಿಕ್ಕಟ್ಟಿನಲ್ಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಹಣ ಕೇಳಲು ಹೋದಾಗ ಸಿಪಿಎಂ ಮುಖಂಡರು ಅಸ್ಪಷ್ಟವಾಗಿ ನುಡಿಯುತ್ತಾರೆ. ಉದ್ಯೋಗದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಇನ್ನು ಭಿಕ್ಷೆ ಬೇಡಿದರೂ ಪ್ರಯೋಜನವಿಲ್ಲ ಎಂದು ಇದೇ ತಿಂಗಳ 30ರಂದು ಜೀವನ ಅಂತ್ಯಗೊಳಿಸಲು ಅನುಮತಿ ನೀಡುವಂತೆ ಪತ್ರದಲ್ಲಿ ಕೋರಿದ್ದಾರೆ.
ಜೋಶಿ ಮತ್ತು ಅವರ ಕುಟುಂಬ ಸದಸ್ಯರು ಕರುವನ್ನೂರ್ ಬ್ಯಾಂಕ್‍ನಲ್ಲಿ ಸುಮಾರು 90 ಲಕ್ಷ ರೂ. ಠೇವಣಿ ಇರಿಸಿದ್ದರು. ಚಿಕಿತ್ಸೆ ಮತ್ತು ಜೀವನ ವೆಚ್ಚಕ್ಕಾಗಿ ಅವರು ಸಂಪೂರ್ಣ ಹಣವನ್ನು ಕೇಳಿದರೂ ಬ್ಯಾಂಕ್ ನೀಡಲು ನಿರಾಕರಿಸಿತು. ಹಲವಾರು ಬಾರಿ ಒಂದಷ್ಟು ಹಣ ಪಡೆದಿದ್ದರೂ ಇನ್ನೂ 70 ಲಕ್ಷ ರೂಪಾಯಿಗೂ ಹೆಚ್ಚು ಹಣ ಬಂದಿಲ್ಲ ಎನ್ನುತ್ತಾರೆ ಜೋಶಿ.