ಗುವಾಹಟಿ: ಕೇಂದ್ರ ಗೃಹ ಸಚಿವಾಲಯದ 'ವಿಶೇಷ ನಿಯೋಗ'ವೊಂದು ಸೋಮವಾರ ಸಂಜೆ ಸಂಘರ್ಷ ಪೀಡಿತ ಮಣಿಪುರ ತಲುಪಿದೆ. ಕಳೆದ ವರ್ಷದ ಮೇ ತಿಂಗಳಿನಿಂದಲೂ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಲು ಕೇಂದ್ರ ಸರ್ಕಾರ 'ಸೂಕ್ತ ಕ್ರಮ' ತೆಗೆದುಕೊಳ್ಳಬೇಕು ಎಂದು ಮಣಿಪುರದ 35 ಶಾಸಕರು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಕೆಲವೇ ಗಂಟೆಗಳೊಳಗೆ ಈ ಬೆಳವಣಿಗೆ ನಡೆದಿದೆ.
ಗೃಹ ಸಚಿವಾಲಯದ ಈಶಾನ್ಯ ಭಾಗದ ಸಲಹೆಗಾರ ಎ.ಕೆ.ಮಿಶ್ರಾ ನೇತೃತ್ವದ ಮೂವರು ಸದಸ್ಯರ ನಿಯೋಗವು ಸೋಮವಾರ ಸಂಜೆ 'ಸಂಬಂಧಪಟ್ಟ ಭಾಗೀದಾರರ' ಜತೆ ಮಾತುಕತೆ ನಡೆಸಿತು. ರಾಜ್ಯದಲ್ಲಿ ಈಗಿನ ಪರಿಸ್ಥಿತಿ ಮತ್ತು ಹಿಂಸಾಚಾರ ಕೊನೆಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿತು.
ಮೈತೇಯಿ ಸಮುದಾಯ ಮತ್ತು ಕುಕಿ ಬುಡಕಟ್ಟು ಜನರ ನಡುವಿನ ಸಂಘರ್ಷದಿಂದ ಮಣಿಪುರದಲ್ಲಿ ಇದುವರೆಗೆ 200 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 60 ಸಾವಿರಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ.
ಕೇಂದ್ರವನ್ನು ಟೀಕಿಸಿದ್ದ ರಾಹುಲ್: ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಮಣಿಪುರಕ್ಕೆ ಭೇಟಿ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 'ಭಾರತ್ ಜೋಡೊ ನ್ಯಾಯ ಯಾತ್ರೆ'ಯ ಆರಂಭದ ದಿನ ಟೀಕಿಸಿದ್ದರು. ಸೋಮವಾರ ಮೇಘಾಲಯದಲ್ಲೂ ಅದೇ ಮಾತು ಪುನರುಚ್ಚರಿಸಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವಾಲಯವು ತನ್ನ ನಿಯೋಗವನ್ನು ಕಳುಹಿಸಿದೆ.